ADVERTISEMENT

ಮಹಿಳಾ ಕಾನ್‌ಸ್ಟೆಬಲ್‌: ಬೈಕ್‌ ಸವಾರಿಗೂ ಸೈ!

250 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಆರಂಭ: ಇಲಾಖೆಯ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 6:37 IST
Last Updated 27 ಮಾರ್ಚ್ 2025, 6:37 IST
ಮೈಸೂರಿನ ಜ್ಯೋತಿನಗರದಲ್ಲಿರುವ ತರಬೇತಿ ಶಾಲೆಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳು ದ್ವಿಚಕ್ರ ವಾಹನ ಚಾಲನಾ ತರಬೇತಿ ಪಡೆಯುತ್ತಿರುವುದು
ಮೈಸೂರಿನ ಜ್ಯೋತಿನಗರದಲ್ಲಿರುವ ತರಬೇತಿ ಶಾಲೆಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳು ದ್ವಿಚಕ್ರ ವಾಹನ ಚಾಲನಾ ತರಬೇತಿ ಪಡೆಯುತ್ತಿರುವುದು   

ಮೈಸೂರು: ‘ಮನೆಯಲ್ಲಿ ವಾಹನ ಚಾಲನೆ ಕಲಿಯಲು ಅವಕಾಶವಿರಲಿಲ್ಲ, ತರಬೇತಿಯಲ್ಲಿ ಬೈಕ್‌ ಓಡಿಸುವುದನ್ನು ಕಲಿತಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಕೆಲಸಕ್ಕೆ ಸೇರಿದಾಗ ಓಡಾಟಕ್ಕೆ ಇತರರನ್ನು ಅವಲಂಬಿಸಬೇಕೆಂಬ ಆತಂಕವೂ ದೂರವಾಗಿದೆ’

–ಇಲ್ಲಿನ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕಾನ್‌ಸ್ಟೇಬಲ್‌ ಹುದ್ದೆಗೆ ತರಬೇತಿ ಪಡೆಯುತ್ತಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ದೀಪಾ ಪಳಕ್ಕೆ ಹೀಗೆ ಭಾವುಕರಾದರು...

ತರಬೇತಿ ಶಾಲೆಯ ಹೊಸ ಪಠ್ಯಕ್ರಮದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳಿಗೆ ದ್ವಿಚಕ್ರ ವಾಹನ ಚಾಲನಾ ತರಬೇತಿಯನ್ನು ಸೇರ್ಪಡೆಗೊಳಿಸಿದ್ದು, ಅವರಲ್ಲಿ ಹೊಸ ಭರವಸೆ ಚಿಗುರಿಸಿದೆ. ಇನ್ನೊಬ್ಬರ ನೆರವಿಲ್ಲದೆ ಕೆಲಸ ನಿರ್ವಹಿಸಬಹುದೆಂಬ ಧೈರ್ಯ ನೀಡಿದೆ. ಹಳೆಯ ಪಠ್ಯಕ್ರಮದಲ್ಲಿ ಪಿಎಸ್‌ಐ ಹುದ್ದೆಗಿಂತ ಮೇಲ್ಪಟ್ಟವರಿಗಷ್ಟೇ ತರಬೇತಿ ನೀಡಲಾಗುತ್ತಿತ್ತು.

ADVERTISEMENT

ಜ್ಯೋತಿನಗರದಲ್ಲಿರುವ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲೆ ಎಂ.ಎಸ್‌.ಗೀತಾ ಮಾರ್ಗದರ್ಶನದಲ್ಲಿ 257 ಪ್ರಶಿಕ್ಷಣಾರ್ಥಿಗಳಿಗೆ ಬುಧವಾರದಿಂದ ದ್ವಿಚಕ್ರ ಚಾಲನಾ ತರಬೇತಿಯನ್ನು ಆರಂಭಿಸಲಾಗಿದ್ದು, ಪ್ರಥಮ ಪ್ರಯತ್ನಕ್ಕೇ ಶ್ಲಾಘನೆ ವ್ಯಕ್ತವಾಗಿದೆ.

ತರಬೇತಿಗೆ 20 ಬೈಕ್‌ ಹಾಗೂ 20 ಸ್ಕೂಟರ್‌ ಬಳಸಲಾಗುತ್ತಿದೆ. ಪ್ರಶಿಕ್ಷಣಾರ್ಥಿಗಳನ್ನು 20 ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತೀ ತಂಡಕ್ಕೊಬ್ಬರಂತೆ ತರಬೇತುದಾರರನ್ನು ನಿಯೋಜಿಸಲಾಗಿದ್ದು, ಬೆಳಿಗ್ಗೆ 6 ರಿಂದ 8.30ರವರೆಗೆ 10 ದಿನ ತರಬೇತಿ ನೀಡಲಿದ್ದಾರೆ. ಎಲ್ಲರಿಗೂ ಎಲ್‌ಎಲ್‌ಆರ್‌ (ಲರ್ನರ್ಸ್‌ ಲೈಸನ್ಸ್‌ ರಿಜಿಸ್ಟ್ರೇಷನ್‌) ಮಾಡಿಸಲಾಗಿದ್ದು, ತರಬೇತಿ ಮುಗಿಸುವ ವೇಳೆಗೆ ಚಾಲನಾ ಪರವಾನಗಿ ಸಿಗಲಿದೆ.

‘ಸದ್ಯ ಬೀಟ್‌ಗಳಿಗೆ ತೆರಳುವ ಮಹಿಳಾ ಕಾನ್‌ಸ್ಟೆಬಲ್‌ಗಳು ಇತರರನ್ನು ಅವಲಂಬಿಸಬೇಕಾದ ಅನಿವಾರ್ಯವಿದೆ. ಇದನ್ನು ಮನಗಂಡು ಇಲಾಖೆಯು ಹೊಸ ಯೋಜನೆ ಪರಿಚಯಿಸಿದೆ. ಇದರಿಂದ ಆತ್ಮಸ್ಥೈರ್ಯ ತುಂಬಲು ಸಾಧ್ಯ’ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

‘ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಒಟ್ಟು 10 ತಿಂಗಳು ತರಬೇತಿ ನಡೆಯಲಿದೆ. ಅದರಲ್ಲಿ 10 ದಿನ ದ್ವಿಚಕ್ರ ಚಾಲನೆಯ ಬಗ್ಗೆ ತರಬೇತಿ ನೀಡುತ್ತಿದ್ದು, ಕೆಲವರಿಗೆ ದ್ವಿಚಕ್ರ ವಾಹನ ಚಾಲನೆ ಕಷ್ಟವಾಗುತ್ತಿದೆ. ಅವರಿಗೆ ಆರಂಭದಲ್ಲಿ ಸ್ಕೂಟರ್‌ನಲ್ಲಿ ಅಭ್ಯಾಸ ಮಾಡಿಸಿ, ನಂತರ ಬೈಕ್‌ ಚಾಲನೆಗೆ ಅವಕಾಶ ನೀಡುತ್ತಿದ್ದೇವೆ’ ಎಂದು ತರಬೇತಿ ಶಾಲೆಯ ಡಿವೈಎಸ್‌ಪಿ ಶಂಕರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.