ಹುಣಸೂರು: ಪ್ರಕೃತಿಯ ಭಾಗವಾಗಿರುವ ಪಕ್ಷಿಗಳನ್ನು ನಾವು ಪೋಷಿಸುವುದರಿಂದ ಪ್ರಾಕೃತಿಕ ವೈವಿದ್ಯತೆ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಎಸಿಎಫ್ ಮಹದೇವಯ್ಯ ಹೇಳಿದರು.
ನಗರದ ಹೊರ ವಲಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ರಾಷ್ಟ್ರೀಯ ಪಕ್ಷಿ ದಿನದ ಅಂಗವಾಗಿ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಮತ್ತು ಚಿತ್ರ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಾಕೃತಿಕ ಜೀವ ಸರಪಳಿಯಲ್ಲಿ ಪಕ್ಷಿಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಪಕ್ಷಿಗಳ ಸಂತತಿ ಅಭಿವೃದ್ಧಿಗೆ ನಾವು ಪೂರಕವಾಗಿ ಸಹಕರಿಸಬೇಕಾಗಿದೆ. ಮನುಷ್ಯರೊಂದಿಗೆ ಸ್ನೇಹಜೀವಿಯಾಗಿ ಬದುಕುತ್ತಿದ್ದ ಗುಬ್ಬಚ್ಚಿ ನಮ್ಮಿಂದ ಕಣ್ಮರೆಯಾಗುವ ಪರಿಸ್ಥಿತಿ ಸೃಷ್ಠಿಯಾಗಿದ್ದು, ಪಕ್ಷಿ ಸಂಕುಲ ಉಳಿಸಿಕೊಳ್ಳುವ ದೃಷ್ಟಿಯಿಂದ ಗುಬ್ಬಚ್ಚಿ ದಿನ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಬಾರದಂತೆ ನಾವು ಎಚ್ಚರವಹಿಸಬೇಕಾಗಿದೆ. ಯುವಪೀಳಿಗೆ ಪಕ್ಷಿ ಲೋಕದಿಂದ ಪರಿಸರ ಸಂರಕ್ಷಣೆಗೆ ಸಿಗುವ ಕೊಡುಗೆ ತಿಳಿಯಬೇಕಾಗಿದೆ’ ಎಂದರು.
'ನಮ್ಮ ಸುತ್ತಮುತ್ತ ವಿವಿಧ ಪ್ರಬೇಧದ ಪಕ್ಷಿಗಳು ಜೀವಿಸುತ್ತಿದ್ದು, ಅವುಗಳನ್ನು ಗುರುತಿಸುವ ಮನಸ್ಥಿತಿಯನ್ನು ನಾವು ಹೊಂದಬೇಕು. ಇಂದು ಹಲವು ಪಕ್ಷಿಗಳ ಹೆಸರು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಕ್ಷಿ ದಿನದಂದು ಅರಣ್ಯ ಇಲಾಖೆ ಪಕ್ಷಿ ಸಂಕುಲಕ್ಕೆ ಸೇರಿದ ವಿವಿಧ ಪ್ರಬೇಧ ಮತ್ತು ಅದರ ಚಲನವಲನ, ಪಕ್ಷಿ ವೀಕ್ಷಣಾ ಕೌಶಲವನ್ನು ತಿಳಿಸಿ ಜಾಗೃತಿ ಮೂಡಿಸಲು ಈ ದಿನವನ್ನು ವಿದ್ಯಾರ್ಥಿಗಳಿಗೆ ಕಾದಿಡಲಾಗಿದೆ’ ಎಂದು ರಂಗನತಿಟ್ಟು ಪಕ್ಷಿಧಾಮದ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಹೇಳಿದರು.
ಪ್ರಾದೇಶಿಕ ವಲಯ ಅರಣ್ಯದ ವಲಯಾರಣ್ಯಾಧಿಕಾರಿ ನಂದಕುಮಾರ್ ಮಾತನಾಡಿ, ‘ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಹೊಂದಿಕೊಂಡಿರುವ ಕಲ್ಲಬೆಟ್ಟ ಸಂರಕ್ಷಿತ ವನದಲ್ಲಿ ಅನೇಕ ಪ್ರಬೇಧದ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ವಿವಿಧ ಜಾತಿಗೆ ಸೇರಿದ ಪಕ್ಷಿಗಳು ಸಿಕ್ಕರೂ ಪ್ರವಾಸಿಗರು ಹುಲಿ, ಆನೆ ವೀಕ್ಷಣೆಗೆ ಆದ್ಯತೆ ನೀಡುತ್ತಾರೆ. ಪಕ್ಷಿ ಪ್ರಾಕೃತಿಕವಾಗಿ ಅರಣ್ಯ ವಿಸ್ತರಣೆ ಸಾಧನವಾಗಿದೆ’ ಎಂದರು.
ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕರ ಪದವಿಪೂರ್ವ ಕಾಲೇಜು ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರ ಸ್ಪರ್ಧೆ ಹಮ್ಮಿಕೊಂಡಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಿಆರ್‌ಎಫ್ಒ ಮಲ್ಲಿಕಾರ್ಜುನ್, ಯೋಗೇಶ್ವರಿ, ಮಂಜುನಾಥ್ ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.