ಮೈಸೂರು: ಫಾರಂ ಕೋಳಿ ಮೊಟ್ಟೆ ದರವು ತೀವ್ರ ಇಳಿಕೆ ಕಾಣುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿಯೇ 100 ಮೊಟ್ಟೆಯ ಬೆಲೆ ₹130ರಿಂದ ₹150ರಷ್ಟು ಇಳಿಕೆಯಾಗಿದೆ.
ಸದ್ಯ ಮೈಸೂರಿನ ಮಾಂಸದ ಅಂಗಡಿಗಳಲ್ಲಿ ಫಾರಂ ಕೋಳಿ ಮೊಟ್ಟೆ 100ಕ್ಕೆ ₹430ರಂತೆ ಮಾರಾಟ ನಡೆದಿದ್ದು, ಪೂರೈಕೆಯೂ ಸ್ಥಿರವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ ₹5ರಂತೆ ಮಾರಾಟ ನಡೆದಿದೆ.
ಕಳೆದ ವರ್ಷ ಡಿಸೆಂಬರ್ ಅಂತ್ಯದವರೆಗೂ ಫಾರಂ ಮೊಟ್ಟೆಯು 100ಕ್ಕೆ ₹580ರ ಸರಾಸರಿಯಲ್ಲಿ ಮಾರಾಟ ಕಂಡಿದ್ದು, ಗ್ರಾಹಕರಿಗೆ ದುಬಾರಿಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ ₹7ರವರೆಗೂ ಮಾರಾಟ ನಡೆದಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿಯೇ ನೂರು ಮೊಟ್ಟೆಗೆ ₹70ರಷ್ಟು ಇಳಿಕೆಯಾಗಿದೆ.
ನಿರೀಕ್ಷೆಗಿಂತಲೂ:
‘ಬೇಸಿಗೆಯ ಅವಧಿಯಲ್ಲಿ ಮೊಟ್ಟೆ ಉತ್ಪಾದನೆ ಸಾಮಾನ್ಯವಾಗಿ ಕುಸಿಯುತ್ತದೆ. ಬೇಡಿಕೆಯೂ ಕಡಿಮೆ ಆಗುವುದರಿಂದ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಳಿತ ಕಾಣುತ್ತದೆ. ಆದರೆ, ಈ ವರ್ಷ ನಿರೀಕ್ಷೆಗಿಂತ ಹೆಚ್ಚೇ ಬೆಲೆ ಇಳಿಕೆ ಆಗಿದೆ’ ಎನ್ನುತ್ತಾರೆ ಕೆ.ಜಿ. ಕೊಪ್ಪಲಿನ ಕೋಳಿ ಮಾಂಸದ ವ್ಯಾಪಾರಿ ಹರ್ಷಿತ್.
ಮೊಟ್ಟೆ ಬೆಲೆ ಇಳಿಕೆ ಆಗಿದ್ದರೂ ಕೋಳಿ ಮಾಂಸದ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಆಗಿಲ್ಲ. ಹಕ್ಕಿ ಜ್ವರವು ಮಾಂಸದ ಪೂರೈಕೆ ಹಾಗೂ ಬೇಡಿಕೆ ಮೇಲೆಯೂ ಯಾವುದೇ ಪರಿಣಾಮ ಬೀರಿಲ್ಲ. ಕೋಳಿ ಫಾರಂಗಳಲ್ಲಿ ಉತ್ಪಾದನೆ ಸಹಜವಾಗಿದ್ದು, ಬಿಸಿಲು ಹೆಚ್ಚಾದಲ್ಲಿ ಮಾತ್ರ ಉತ್ಪಾದನೆ ತಗ್ಗುವ ಸಾಧ್ಯತೆ ಇದೆ.
ಸದ್ಯ ನಗರದ ಮಾರುಕಟ್ಟೆಯಲ್ಲಿ ಫಾರಂ ಕೋಳಿ (ಜೀವಂತ) ಪ್ರತಿ ಕೆ.ಜಿ.ಗೆ ₹130ರ ದರವಿದ್ದರೆ, ಕೋಳಿ ಮಾಂಸ ₹190 ಹಾಗೂ ಚರ್ಮರಹಿತ ಕೋಳಿ ಮಾಂಸವು ₹220 ಸರಾಸರಿಯಲ್ಲಿ ಮಾರಾಟ ನಡೆದಿದೆ. ಬೇಸಿಗೆಯ ಅವಧಿಯಲ್ಲಿ ಸಾಮಾನ್ಯವಾಗಿ ಕೋಳಿ ಮಾಂಸ ಸೇವನೆ ಕಡಿಮೆ ಆಗುವುದರಿಂದ ಮಾಂಸದ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗುತ್ತದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಅಷ್ಟು ವ್ಯತ್ಯಾಸ ಆಗಿಲ್ಲ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆ ಆಗಬಹುದು ಎಂದು ವರ್ತಕರು ಹೇಳುತ್ತಾರೆ.
ಹೋಟೆಲ್ ವರ್ತಕರಿಗೆ ಅನುಕೂಲ: ಮೊಟ್ಟೆ ದರ ಇಳಿಕೆಯು ಹೋಟೆಲ್ ಹಾಗೂ ಬೀದಿ ಬದಿಯ ತಿನಿಸು ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಬೆಲೆ ಏರಿಕೆ ಆಗಿದ್ದರೂ ಬಹುತೇಕ ಹೋಟೆಲ್‌ಗಳಲ್ಲಿ ಬೇಯಿಸಿದ ಮೊಟ್ಟೆ ದರ ₹10ಕ್ಕೆ ಸ್ಥಿರವಾಗಿತ್ತು. ಆಮ್ಲೆಟ್, ಫ್ರೈಡ್ ರೈಸ್ ವರ್ತಕರು ಮಾತ್ರ ಅಲ್ಪ ಪ್ರಮಾಣದಲ್ಲಿ ದರ ಏರಿಸಿದ್ದರು. ಮೊಟ್ಟೆ ಬೋಂಡ ದರವು ₹12ರಿಂದ ₹15ರವರೆಗೂ ಏರಿಕೆ ಕಂಡಿತ್ತು.
ಶಿಕ್ಷಕರ ನಿಟ್ಟುಸಿರು
ಕೋಳಿ ಮೊಟ್ಟೆ ಅಗ್ಗವಾಗಿರುವುದರಿಂದ ಸರ್ಕಾರಿ ಶಾಲೆಗಳ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ವಾರಕ್ಕೆ ಮೂರು ದಿನ ಬೇಯಿಸಿದ ಕೋಳಿ ಮೊಟ್ಟೆ ನೀಡುತ್ತಿದ್ದು ಇದನ್ನು ಸರ್ಕಾರ ಈಚೆಗೆ ಆರಕ್ಕೆ ಏರಿಸಿದೆ. ಮೊಟ್ಟೆ ಬೆಲೆ ನಿರಂತರ ಏರಿಕೆ ಆಗುತ್ತಿದ್ದರೂ ಸರ್ಕಾರ ಮಾತ್ರ ಪ್ರತಿ ಮೊಟ್ಟೆಗೆ ₹6 ನೀಡುತ್ತಿದ್ದು ಇದರಲ್ಲಿಯೇ ಸಾಗಣೆ ವೆಚ್ಚವೂ ಸೇರಿದೆ. ಮೊಟ್ಟೆ ದುಬಾರಿಯಾದ ಕಾರಣಕ್ಕೆ ಸರ್ಕಾರಿ ಶಾಲೆಗಳ ಶಿಕ್ಷಕರು ಪರದಾಡಿದ್ದು ಕೆಲವರು ಸ್ವಂತ ಹಣ ವ್ಯಯಿಸಿ ಮೊಟ್ಟೆ ಖರೀದಿ ಮಾಡಿದ್ದರು. ಇದೀಗ ಮೊಟ್ಟೆ ದರ ಅಗ್ಗವಾಗಿದ್ದು ಶಾಲೆ ಹಾಗೂ ಅಂಗನವಾಡಿಗಳಲ್ಲಿ ವಿತರಣೆಗೂ ಇದ್ದ ಅಡ್ಡಿ ದೂರವಾಗಿದೆ.
ಕೋಳಿ ಮಾಂಸದ ಉತ್ಪಾದನೆ ಮೇಲೆ ಹಕ್ಕಿ ಜ್ವರ ಪರಿಣಾಮ ಬೀರಿಲ್ಲ. ಸದ್ಯ ಪೂರೈಕೆ ಸಹಜವಾಗಿದೆ. ಬಿಸಿಲು ತೀವ್ರಗೊಂಡಲ್ಲಿ ಕೋಳಿಗಳು ಸಾಯುವ ಸಾಧ್ಯತೆ ಇದ್ದು ಆಗ ಉತ್ಪಾದನೆ ಕುಸಿಯಬಹುದುಶಂಕರ್, ಕೋಳಿ ಫಾರಂ ಮಾಲೀಕ
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆ ಬೆಲೆ ₹6ರಿಂದ ₹5ಕ್ಕೆ ಇಳಿಕೆ ಆಗಿದೆ. ಮಾಂಸದ ಅಂಗಡಿಗಳಿಗೆ ಪೂರೈಕೆ ಸಹಜವಾಗಿದ್ದು ಕೋಳಿ ಮಾಂಸದ ಬೆಲೆ ಇಳಿಯುವ ಸಾಧ್ಯತೆ ಇದೆ.ಹರ್ಷಿತ್, ಕೋಳಿ ಮಾಂಸ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.