ADVERTISEMENT

ಕೊಕ್ಕರೆ, ಕೋಳಿ ಸಾವು; ಹಕ್ಕಿಜ್ವರದ ಭೀತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 14:23 IST
Last Updated 11 ಮಾರ್ಚ್ 2020, 14:23 IST
ಹೆಬ್ಬಾಳದಲ್ಲಿ ಸತ್ತುಬಿದ್ದಿದ್ದ ಕೊಕ್ಕರೆ
ಹೆಬ್ಬಾಳದಲ್ಲಿ ಸತ್ತುಬಿದ್ದಿದ್ದ ಕೊಕ್ಕರೆ   

ಮೈಸೂರು: ಮೈಸೂರು ನಗರದಲ್ಲಿ ವಾರದಿಂದ ಈಚೆಗೆ 15ಕ್ಕೂ ಹೆಚ್ಚು ಕೋಳಿ, ಕೊಕ್ಕರೆಗಳು ಮೃತಪಟ್ಟಿದ್ದು, ಹಕ್ಕಿಜ್ವರದ ಆತಂಕ ನಿರ್ಮಾಣವಾಗಿದೆ.

ಮೇಟಗಳ್ಳಿ ನಿವಾಸಿ ರಾಮಣ್ಣ ಎಂಬುವವರ ಮನೆಯಲ್ಲಿ ಸಾಕಿದ್ದ 10 ಕೋಳಿಗಳು ಎರಡು ದಿನಗಳ ಅಂತರದಲ್ಲಿ ಸತ್ತಿರುವ ವಿಚಾರವನ್ನು ಸ್ಥಳೀಯರು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಸ್ವಸ್ಥಗೊಂಡಿದ್ದ ಒಂದು ಕೋಳಿಯನ್ನು ಅಧಿಕಾರಿಗಳು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.

‘ಅಸ್ವಸ್ಥ ಕೋಳಿಯನ್ನು ಪರೀಕ್ಷಿಸಿದಾಗ ಮೇಲ್ನೋಟಕ್ಕೆ ಕೊಕ್ಕರೆ ರೋಗದ ಲಕ್ಷಣ ಕಂಡುಬರುತ್ತಿದೆ. ಇದಕ್ಕೂ ಹಕ್ಕಿಜ್ವರಕ್ಕೂ ಸಂಬಂಧವಿಲ್ಲ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ. ಗಡಿಭಾಗದ 9 ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಇಡಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಅಜಿತ್‌ ಕುಮಾರ್‌ ಹೇಳಿದರು.

ADVERTISEMENT

ವಿದ್ಯಾರಣ್ಯಪುರಂ ವ್ಯಾಪ್ತಿಯಲ್ಲಿ ಆರು ಹಾಗೂ ಹೆಬ್ಬಾಳ ವ್ಯಾಪ್ತಿಯಲ್ಲಿ ಎರಡು ಕೊಕ್ಕರೆ ಮೃತಪಟ್ಟಿವೆ. ಇವುಗಳ ಅಂಗಾಂಗ ಮಾದರಿಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಕಾರಣ, ಇಲ್ಲಿನ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆಯಲ್ಲೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.