ADVERTISEMENT

ಶಾಸಕ ದರ್ಶನ್‌ ಅವಧಿಯಲ್ಲಿ ಅಭಿವೃದ್ಧಿ ಕುಂಠಿತ: ಬಿಜೆಪಿ ಅಧ್ಯಕ್ಷ ಸಿದ್ದರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:58 IST
Last Updated 29 ಸೆಪ್ಟೆಂಬರ್ 2025, 4:58 IST
<div class="paragraphs"><p>ದರ್ಶನ್ ಧ್ರುವನಾರಾಯಣ</p></div>

ದರ್ಶನ್ ಧ್ರುವನಾರಾಯಣ

   

ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಅವಧಿಯಲ್ಲಿ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ 2ನೇ ಹಂತದ ಅಭಿವೃದ್ಧಿ ಹಾಗೂ ಒಳಚರಂಡಿ ಯೋಜನೆಗಳು ಕುಂಠಿತಗೊಂಡಿದ್ದು, ನಗರದ ಅಭಿವೃದ್ಧಿಗೆ ತೊಡಕಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಈ ಹಿಂದೆ ಶಾಸಕರಾಗಿದ್ದ ಹರ್ಷವರ್ಧನ್ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರ ಅನುಕೂಲಕ್ಕಾಗಿ 100 ಕೊಠಡಿಗಳ ವಸತಿ ಗೃಹ ನಿರ್ಮಾಣಕ್ಕಾಗಿ ₹76 ಕೋಟಿ, ಬೆಳ್ಳಿ ರಥ ನಿರ್ಮಾಣಕ್ಕಾಗಿ ₹45 ಲಕ್ಷ ಅನುದಾನ ತಂದು, ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 2 ನೇ ಹಂತದ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನಡೆಸಿದ್ದರು ಎಂದರು.

ADVERTISEMENT

ದರ್ಶನ್ ಧ್ರುವನಾರಾಯಣ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗಿದ್ದ ಅನುದಾನ ವಾಪಸ್ ಹೋಗಿದೆ ಎಂದು ಹೇಳುತ್ತಿದ್ದಾರೆ. ಹರ್ಷವರ್ಧನ್ ಅವದಿಯಲ್ಲಿ ನನೆಗುದಿಗೆ ಬಿದ್ದಿದ್ದ ಒಳಚರಂಡಿ ಯೋಜನೆ ಮುಂದುವರೆದ ಕಾಮಗಾರಿಗಾಗಿ ₹140 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರೂ ಇವರ ಅವಧಿಯಲ್ಲಿ ಒಳಚರಂಡಿ ಯೋಜನೆ ಪೂರ್ಣಗೊಂಡಿಲ್ಲ, ಇವರ ಎರಡೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ನಗರದ ಅಭಿವೃದ್ದಿ ಕುಂಠಿತ ಗೊಂಡಿದೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯ ಕಪಿಲೇಶ್ ಮಾತನಾಡಿ, ಶಾಸಕ ದರ್ಶನ್ ಧ್ರುವನಾರಾಯಣ ದೇವಾಲಯದ ಆಸು-ಪಾಸಿನ ಲಾಡ್ಜ್ ಮಾಲೀಕರ ಒತ್ತಡದಿಂದಾಗಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವಸತಿ ಗೃಹ ನಿರ್ಮಾಣ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ. ನಗರದದಲ್ಲಿ ಗಾಂಜಾ-ಅಪೀಮು ಮಾರಾಟವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದೆ, ಇದರಿಂದಾಗಿ ನಗರದಲ್ಲಿ ಯುವಕರು ಲಾಂಗು-ಮಚ್ಚು ಹಿಡಿದು ಒಡೆದಾಡುತ್ತಿದ್ದಾರೆ ಎಂದರು.

ದೇವಾಲಯದ ಸಮೀಪ ನಿಯಮಬಾಹಿರವಾಗಿ ಎರಡು ಅಂತಸ್ತಿನ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದೆ, ಇದರಿಂದ ದೇವಾಲಯದ ರಾಜಗೋಪುರಕ್ಕೆ ದಕ್ಕೆಯಾಗುತ್ತದೆ. ಅಕ್ರಮ ಕಟ್ಟಡ ತಡೆಯಬೇಕಾದ ಪ್ರಾಚ್ಯವಸ್ತು ರಕ್ಷಣಾ ಇಲಾಖೆ ಅಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳು ಕಟ್ಟಡ ಮಾಲೀಕರಿಂದ ಲಂಚ ಪಡೆದು ಈ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಟ್ಟಡ ನಿರ್ಮಾಣ ತಡೆಯದಿದ್ದರೆ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಕಾರ್ಯದರ್ಶಿ ರಾಘವೇಂದ್ರ, ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ಬಳಕೆಯಾಗದ ಅನುದಾನ: ಆರೋಪ
ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅನಂತ ಮಾತನಾಡಿ, ಹಿಂದಿನ ಶಾಸಕರ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ತಂದ ₹13 ಕೋಟಿ ಅನುದಾನ ಬಳಕೆಯಾಗಿಲ್ಲ, ಇದರಿಂದಾಗಿ 2 ನೇ ಅವದಿಯ ₹42 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ನಗರಸಭೆಯಲ್ಲಿ ಬಿ ಖಾತೆ, ಟ್ರೇಡ್ ಲೈಸ್ ಪಡೆದುಲೊಳ್ಳುವ ವಿಚಾರವಾಗಿ ಅಧಿಕಾರಿಗಳು ಮಧ್ಯವರ್ತಿಗಳನ್ನು ಇಟ್ಟುಕೊಂಡು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ, ನಗರಸಭೆಯ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ. ಬಿಜೆಪಿ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.