ನಂಜನಗೂಡು:‘ವಿಧಾನಸಭಾ ಚುನಾವಣೆ ವೇಳೆ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ಹಂಚಿದ ಕುರಿತು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡಿದ್ದು, ಆ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಭಾಸ್ಕರ್‌ರಾವ್ ನೇತೃತ್ವದ ತಂಡವು ಡಿವೈಎಸ್ಪಿ ಗೋವಿಂದರಾಜು ಅವರಿಗೆ ಭಾನುವಾರ ದೂರು ಸಲ್ಲಿಸಿದೆ.
ದೂರು ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವರುಣದಲ್ಲಿ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರು ಕುಕ್ಕರ್, ಇಸ್ತ್ರಿ ಪೆಟ್ಟಿಗೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ರೂಪಿಸಿದ್ದರು. ನನ್ನ ತಂದೆ ಸಿದ್ದರಾಮಯ್ಯ ಅವರ ಕೈಯಿಂದಲೇ ಸಮುದಾಯದ ಸಾವಿರಾರು ಜನಕ್ಕೆ ಕುಕ್ಕರ್ ಮತ್ತು ಇಸ್ತ್ರಿ ಪೆಟ್ಟಿಗೆ ವಿತರಿಸಿದ್ದರು. ಇದರಿಂದ ಕ್ಷೇತ್ರದಲ್ಲಿ ನಾವು ಗೆಲ್ಲಲು ಸಮುದಾಯದವರು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಸೆ.15ರಂದು ನಂಜನಗೂಡಿನಲ್ಲಿ ನಡೆದ ಸಮುದಾಯ ಭವನದ ಕಚೇರಿ ಉದ್ಘಾಟನೆಯಲ್ಲಿ ಕಾಂಗ್ರೆಸ್ ಮುಖಂಡ ಯತೀಂದ್ರ ಅವರೇ ಒಪ್ಪಿಕೊಂಡಿದ್ದಾರೆ’ ಎಂದರು.
‘ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಮಗನೇ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಮಾಧ್ಯಮದಲ್ಲೂ ವರದಿಯಾಗಿದೆ. ಬಿಜೆಪಿ ಕೂಡ ಪ್ರಕರಣದ ನೈಜತೆಯನ್ನು ಖಾತರಿಪಡಿಸಿಕೊಂಡಿದೆ. ಇದಾದ ಬಳಿಕ, ಯತೀಂದ್ರ ಅವರು, ‘ಸಾವಿರಾರು ಜನಕ್ಕೆ ನೀಡಿಲ್ಲ, ಸಾವಿರಕ್ಕಿಂತ ಕಡಿಮೆ ಜನಕ್ಕೆ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.
‘ಚುನಾವಣೆ ನೀತಿ ಸಂಹಿತೆಯ ಪ್ರಕಾರ ಒಬ್ಬ ವ್ಯಕ್ತಿಗೆ ಆಮಿಷ ಒಡ್ಡಿದ್ದರೂ ಅದು ಅಪರಾಧವೇ. ರಾಜಕೀಯ ನೀತಿ ಪಾಠ ಹೇಳುವ ಸಿದ್ದರಾಮಯ್ಯ ಆಮಿಷ ಒಡ್ಡಿ ಮತ ಪಡೆದಿರುವುದು ಅಕ್ಷಮ್ಯ ಅಪರಾಧ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.