ಮೈಸೂರು: ‘ಕಾಂಗ್ರೆಸ್‌ಗೆ ಲೀಡ್ ಬಂದ ಕಡೆಗಳಲ್ಲಿ ಮತ ಕಳ್ಳತನ ಆಗಿದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಒತ್ತಾಯಿಸಿದರು.
‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲೂ ಮತಕಳ್ಳತನ ಆಗಿದೆ’ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿಕೆಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಎಲ್ಲೆಲ್ಲಿ ಲೀಡ್ ಬಂದಿದೆಯೋ ಅಲ್ಲೆಲ್ಲಾ ಮತ ಕದ್ದಿದ್ದೀರಾ? ಮತದಾರರಿಗೆ ನೀವು ಹಣ ಹಂಚಿಲ್ಲವೇ? ಇಲ್ಲವೆಂದಾದರೆ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಪ್ರಮಾಣ ಮಾಡಲು ಸಿದ್ಧವಿದ್ದೀರಾ?’ ಎಂದು ಕೇಳಿದರು.
‘ಮತದಾರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು, ಅವರ ಮನೆತನದ ಮೇಲಿನ ಗೌರವದ ಕಾರಣದಿಂದ ಗೆಲ್ಲಿಸಿದ್ದಾರೆ. ತೀರ್ಪು ನೀಡಿದ್ದಾರೆ. ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರು ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದುದ್ದನ್ನು ನೋಡಿದ್ದೇವೆ. ಹೀಗಿದ್ದರೂ ಮತಕಳ್ಳತನದ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣಾ ಆಯೋಗದ ವಿರುದ್ಧ ಸುಳ್ಳು ಹೇಳುತ್ತಿರುವುದು ಖಂಡನೀಯ’ ಎಂದರು.
‘ಚುನಾವಣೆಯಾಗಿ ಒಂದು ವರ್ಷ ಕಳೆದ ಮೇಲೆ ಆರೋಪ ಮಾಡುತ್ತಿದ್ದೀರಲ್ಲಾ, ಈವರೆಗೆ ಸುಮ್ಮನಿದ್ದಿರೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋತಾಗ ಒಪ್ಪಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಕೇಳಿದರು.
‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂತಲ್ಲಾ, ಆಗ ಮತ ಕಳ್ಳತನ ಮಾಡಿದ್ರಾ? ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುವ ಹೇಳಿಕೆಗಳನ್ನು ಕೊಡುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಆಡಳಿತದಲ್ಲಿ ವೈಫಲ್ಯ ಕಾಣುತ್ತಿದೆ. ಇದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶಕ್ತಿ ಇಲ್ಲದ ಕಾರಣ ಇಲ್ಲಸಲ್ಲದ ಆರೋಪಗಳಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.
‘ಕಾಂಗ್ರೆಸ್‌ನವರ ಧಾರಾವಾಹಿಗಳನ್ನು ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸುತ್ತಾರೆ. ತಾಕತ್ತಿದ್ದರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ’ ಎಂದು ಸವಾಲು ಹಾಕಿದರು.
ನಗರ ಘಟಕದ ವಕ್ತಾರ ಮೋಹನ್, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಮಾಧ್ಯಮ ಸಂಚಾಲಕ ಸಂತೋಷ್ ಕುಮಾರ್ ಬಿ.ಎಂ. ಇದ್ದರು.
ಒಂದು ಪಕ್ಷದ ವಕ್ತಾರರಾದ ಲಕ್ಷ್ಮಣ ಅವರು ಸಾರ್ವಜನಿಕರಿಗೆ ಗೊಂದಲ ಉಂಟು ಮಾಡುವ ಹೇಳಿಕೆ ನೀಡಬಾರದುಎಲ್.ನಾಗೇಂದ್ರ ಅಧ್ಯಕ್ಷ ಬಿಜೆಪಿ ನಗರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.