ಮೈಸೂರು: ‘ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಕಾರ್ಯನಿರ್ವಹಿಸುತ್ತಿದ್ದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವಹಿಸಬೇಕು’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೊಂದು ಬಹಳ ಗಂಭೀರವಾದ ಪ್ರಕರಣವಾಗಿದ್ದು, ಯಾವುದೇ ಕಾರಣಕ್ಕೂ ಹಳ್ಳ ಹಿಡಿಯದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಮೈಸೂರು ನಗರವು ನಾಡಹಬ್ಬ ದಸರೆಯಿಂದಾಗಿ ಹೆಸರು ಗಳಿಸಿತ್ತು. ಈಗ ‘ಡ್ರಗ್ಸ್ ನಗರ’ ಎಂಬ ಕುಖ್ಯಾತಿಗೆ ಒಳಗಾಗಿರುವುದು ನೋವಿನ ಸಂಗತಿ. ಇಲ್ಲಿ ₹390 ಕೋಟಿ ಮೌಲ್ಯದ ಮಾದಕವಸ್ತು ಪತ್ತೆಯಾಗಿರುವುದು, ಅದನ್ನು ತಯಾರಿಸುವ ಕಾರ್ಖಾನೆಯೇ ಇತ್ತು ಎನ್ನುವುದು ಬಹಳ ಆತಂಕದ ಸಂಗತಿ. ಅದು ಮೈಸೂರಿನ ಪೊಲೀಸರಿಗೆ ತಿಳಿದೇ ಇರಲಿಲ್ಲದಿರುವುದು ಹಾಗೂ ಮತ್ತು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡಿರುವುದು ರಾಜ್ಯ ಸರ್ಕಾರ ಹಾಗೂ ಇಲ್ಲಿನ ಪೊಲೀಸ್ ವ್ಯವಸ್ಥೆ ತಲೆತಗ್ಗಿಸಬೇಕಾದ ವಿಚಾರ’ ಎಂದು ದೂರಿದರು.
ವಾಪಸ್ ಪಡೆದುಕೊಂಡಿದ್ದೇಕೆ?
‘ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆದುಕೊಳ್ಳಲಾಯಿತು. ಹೀಗೆ ಮಾಡಿದ್ದೇಕೆ ಎಂಬುದನ್ನು ನಗರ ಪೊಲೀಸ್ ಕಮಿಷನರ್ ಸಾರ್ವಜನಿಕವಾಗಿ ತಿಳಿಸಬೇಕು’ ಎಂದು ಒತ್ತಾಯಿಸಿದರು.
‘ಆ ಪ್ರಕರಣದ ತನಿಖೆ ಹಳ್ಳ ಹಿಡಿಸಲಾಗಿದೆ. ತನಿಖೆಯ ಪ್ರಗತಿ ಏನಾಯಿತು ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ, ಸರ್ಕಾರವೇ ಸ್ವಯಂಪ್ರೇರಿತವಾಗಿ ಎನ್‌ಐಗೆ ವಹಿಸಬೇಕು. ಇಲ್ಲದಿದ್ದರೆ, ಮಧ್ಯಪ್ರವೇಶಿಸುವಂತೆ ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
‘ವಿದ್ಯಾರ್ಥಿ–ಯುವಜನರ ಬದುಕನ್ನು ಹಾಳು ಮಾಡುವಂತಹ ಡ್ರಗ್ಸ್ ಮಾಫಿಯಾ ಇದಾಗಿದ್ದು, ರಾಜ್ಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ದೇಶವನ್ನು ವಿದ್ವಂಸಗೊಳಿಸುವಂತಹ ವ್ಯವಸ್ಥಿತ ಪಿತೂರಿಯನ್ನು ವಿದೇಶಿ ಜಾಲ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಈ ಜಾಲ ಪತ್ತೆಯಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟನೆಯನ್ನೂ ಕೊಡಲಿಲ್ಲ. ಇದರ ಅರ್ಥವೇನು? ಡ್ರಗ್ಸ್ ಮಾಫಿಯಾವನ್ನು ಬೇರುಸಮೇತ ಕಿತ್ತು ಹಾಕಲು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ಮಹಾನಗರ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಕಾರ್ಯಾಲಯ ಕಾರ್ಯದರ್ಶಿ ನಂದಕುಮಾರ್ ಎಸ್. ಇದ್ದರು.
‘ಪ್ರಭಾವಿ ಶಕ್ತಿಯೊಂದರ ಕೈವಾಡ’
‘ಜಾಲದ ಹಿಂದೆ ಪ್ರಭಾವಿ ಶಕ್ತಿಯೊಂದರ ಕೈವಾಡವಿದೆ. ಇದನ್ನು ಹೊರತೆಗೆಯುವುದು ನಮ್ಮ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಈ ಜಾಲದ ಹಿಂದೆ ಇರುವ ಕಠೋರ, ಕೆಟ್ಟ ಶಕ್ತಿ ಯಾವುದು ಎಂಬುದನ್ನು ಈ ವೇಳೆಗಾಗಲೇ ಪತ್ತೆ ಹಚ್ಚಬೇಕಿತ್ತು. ಆದರೆ, ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣದಿರುವುದು ಅಸಮಾಧಾನ ತಂದಿದೆ’ ಎಂದು ರಘು ಹೇಳಿದರು.
‘ಮೈಸೂರಿನ ಪ್ರತಿ ಮನೆ, ಕುಟುಂಬದ, ಶಿಕ್ಷಣ ಸಂಸ್ಥೆಯ ಆತಂಕದ ಪ್ರಶ್ನೆ ಇದಾಗಿದೆ ಎಂಬುದನ್ನು ಪೊಲೀಸರು ತಿಳಿಯಬೇಕು’ ಎಂದು ಹೇಳಿದರು.
ಈ ಪ್ರಕರಣ ಪತ್ತೆ ಹಚ್ಚುವಲ್ಲಿ ನಗರ ಪೊಲೀಸ್ ಆಯುಕ್ತರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರಬಹುದು. ಆದರೆ, ಅವರ ಕೈಕಟ್ಟಿ ಹಾಕಿರಲೂಬಹುದು.ಆರ್.ರಘು ಅಧ್ಯಕ್ಷ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.