ಬಿಜೆಪಿ ಧ್ವಜ
ತಿ.ನರಸೀಪುರ: ‘ಪುರಸಭೆಗೆ ಪಾವತಿಸಬೇಕಿದ್ದ ಆಸ್ತಿ ತೆರಿಗೆ ಹಣ ವಂಚನೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸಬೇಕು. ಇದರಲ್ಲಿ ಭಾಗಿಯಾದ ಪುರಸಭೆ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕ್ಷೇತ್ರ ಬಿಜೆಪಿ ಮುಖಂಡರು ಗುರುವಾರ ಒತ್ತಾಯಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರ ಬಿಜೆಪಿ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ‘ಬ್ಯಾಂಕಿನ ಮೊಹರು ನಕಲಿ ಮಾಡಿ ಜನರ ಕಂದಾಯದ ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ ವಿರುದ್ಧ ತನಿಖೆಯಾಗಬೇಕು. ಇಂತಹ ಅವ್ಯವಹಾರದಿಂದ ಪುರಸಭೆ ವ್ಯಾಪ್ತಿಯ ಜನರು ತಲೆ ತಗ್ಗಿಸುವಂತಾಗಿದೆ. ಅಧ್ಯಕ್ಷನಾಗಿದ್ದ ಈತನಿಗೆ ಅಧಿಕಾರ ನೀಡಿ ದಂಧೆ ಮಾಡಲು ಸರ್ಕಾರ ಪರೋಕ್ಷವಾಗಿ ಸಹಕಾರ ನೀಡಿದಂತಿದೆ. ಇಂತಹವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಬೆಂಬಲವಿದೆ’ ಎಂದು ಆರೋಪಿಸಿದರು.
‘ಲೋಕಾಯುಕ್ತ ಬಲೆಗೆ ಬಿದ್ದಿದ್ದ ವ್ಯಕ್ತಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿ ಪುರಸಭಾ ಅಧ್ಯಕ್ಷನನ್ನಾಗಿ ಮಾಡಿದ್ದು ಸರ್ಕಾರದ ಸಾಧನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಸಿ.ಮಹದೇವಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ದಯಾನಂದ ಪಟೇಲ್ ಮಾತನಾಡಿ, ‘ನಂಜುಂಡಸ್ವಾಮಿಯು ಆಸ್ತಿ ತೆರಿಗೆ ಕಟ್ಟುತ್ತೇನೆಂದು ಜನರಿಂದ ಹಣ ಪಡೆದು ಬ್ಯಾಂಕಿನ ಸೀಲನ್ನೇ ನಕಲಿ ಮಾಡಿ ಖಾತೆದಾರರಿಗೆ ರಸೀದಿ ನೀಡಿ ಪುರಸಭೆಗೆ, ಜನರಿಗೆ ವಂಚಿಸಿದ್ದಾರೆ. ಇಂತಹವರನ್ನು ಪ್ರೋತ್ಸಾಹಿಸುವ ಮುಖ್ಯಮಂತ್ರಿ, ಉಸ್ತುವಾರಿ ಸಚಿವರಿಗೆ ಇವರ ಬಗ್ಗೆ ಅರಿವಿರಬೇಕಿತ್ತು’ ಎಂದರು.
‘ಪ್ರಕರಣದ ಸಮಗ್ರ ತನಿಖೆಗೆ ಕೂಡಲೇ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಬೇಕು. ಕಳೆದ 8 ವರ್ಷಗಳ ಹಳೆಯ ಕಡತಗಳ ಪರಿಶೀಲಿಸಿ ಯಾವುದೇ ಪಕ್ಷದ ತಪ್ಪಿತಸ್ಥರಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಹಾಗೂ ಪುರಸಭೆ ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿ ನೇಮಿಸುವಂತೆ’ ಒತ್ತಾಯಿಸಿದರು.
‘ಪುರಸಭೆಯಲ್ಲಿ ಖಾತೆ ಮಾಡಿಸಿಕೊಡುವ ದಂಧೆಯನ್ನು ತನ್ನ ಕಾಯಕ ಮಾಡಿಕೊಂಡಿರುವ ನಂಜುಂಡಸ್ವಾಮಿ, ಪುರಸಭೆಯಲ್ಲಿ ಮಾಡಿಸಿರುವ ಸಾವಿರಾರು ಖಾತೆಗಳ ಬಗ್ಗೆ, ಜನರ ತೆರಿಗೆ ವಂಚನೆ ಬಗ್ಗೆ ತನಿಖೆ ಪಾರದರ್ಶಕ ವಾಗಿ ನಡೆಯಬೇಕೆಂಕು’ ಎಂದು ಪುರಸಭಾ ಬಿಜೆಪಿ ಸದಸ್ಯ ಕಿರಣ್ ಒತ್ತಾಯಿಸಿದರು.
ಡಾ.ರೇವಣ್ಣ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯಪ್ಪ), ಮುಖಂಡ ಎನ್.ಲೋಕೇಶ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕೆ.ಸಿ.ಲೋಕೇಶ್ ನಾಯಕ್, ಅಕ್ಕಿ ನಂಜುಂಡಸ್ವಾಮಿ, ಚೌಹಳ್ಳಿ ಸಿದ್ದರಾಜು, ಕರೋಹಟ್ಟಿ ರಾಜಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.