ADVERTISEMENT

ಜನತಾ ಕರ್ಫ್ಯೂ; ನೆರವಿಗಾಗಿ ಬೆಜೆಪಿ ಸಹಾಯವಾಣಿ

ಕರ್ಫ್ಯೂ ಬೆಂಬಲಿಸುವಂತೆ ಒಕ್ಕೊರಲ ಮನವಿ; ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಮೊರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:20 IST
Last Updated 21 ಮಾರ್ಚ್ 2020, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 22ರ ಭಾನುವಾರದಂದು ಕರೆ ನೀಡಿರುವ ಜನತಾ ಕರ್ಫ್ಯೂ ಸಂದರ್ಭ, ಸಾರ್ವಜನಿಕರ ಅಗತ್ಯ ತುರ್ತು ಸೇವೆ ಪೂರೈಸಲು ಮೈಸೂರು ನಗರ (ಜಿಲ್ಲಾ) ಘಟಕ ಸಹಾಯವಾಣಿ ಆರಂಭಿಸಿದೆ’ ಎಂದು ಅಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.

‘ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‌ಗಳಲ್ಲೂ ಸಹಾಯವಾಣಿಯ ಸೇವೆ ಲಭ್ಯವಿದ್ದು, ಸ್ವಯಂ ಸೇವಕರ ಮೊಬೈಲ್‌ ನಂಬರ್‌ಗಳನ್ನು ಎಲ್ಲೆಡೆ ಪ್ರಚಾರ ಮಾಡಲಾಗಿದೆ. ತುರ್ತಿದ್ದವರು ಈ ಸಂಖ್ಯೆಗಳನ್ನು ಸಂಪರ್ಕಿಸಿ, ತಮಗೆ ಬೇಕಾದ ಅಗತ್ಯ ಸೇವೆಗಳನ್ನು ಪಡೆಯಬಹುದು’ ಎಂದು ಹೇಳಿದರು.

‘ಇದೀಗ ಆರಂಭಿಸಲಾಗುತ್ತಿರುವ ಸಹಾಯವಾಣಿ, ಕೊರೊನಾ ವೈರಸ್ ಭೀತಿ ಸಂಪೂರ್ಣ ನಿರ್ಮೂಲನೆಯಾಗುವ ತನಕವೂ ಕಾರ್ಯಾಚರಿಸಲಿದೆ. ನಾವು ನೀಡಿದ ಮೊಬೈಲ್‌ ನಂಬರ್‌ಗಳಿಗೆ ಅವಶ್ಯವಿದ್ದವರು ಕರೆ ಮಾಡಿ, ಏನು ಬೇಕು ಎಂಬುದನ್ನು ತಿಳಿಸಿದರೆ, ನಮ್ಮ ಕಾರ್ಯಕರ್ತರ ಪಡೆ ನಿಮ್ಮ ಮನೆ ಬಾಗಿಲಿಗೆ ಸೇವೆ ಒದಗಿಸಲಿದೆ. ಆ ಸೇವೆಗೆ ತಗುಲುವ ವೆಚ್ಚದ ಅಧಿಕೃತ ಬಿಲ್ ಸಹ ನೀಡಿ, ಅಷ್ಟೇ ಹಣ ಪಡೆದುಕೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೊರೊನಾ ವೈರಸ್ ಇದೀಗ ನಮ್ಮ ದೇಶದಲ್ಲಿ ಎರಡನೇ ಹಂತದಲ್ಲಿದೆ. ಈ ಹಂತ ದಾಟಿ ಹೋಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಅಗತ್ಯ ವಸ್ತು ಖರೀದಿಗೆ ಮುಗಿ ಬೀಳಬೇಡಿ. ಸದಾ ನಿಮ್ಮೊಟ್ಟಿಗೆ ನಾವಿದ್ದೇವೆ. ಆತಂಕಕ್ಕೀಡಾಗದೆ ಮನೆಗಳಲ್ಲೇ ಕಾಲ ಕಳೆಯಿರಿ. ಅವಶ್ಯ ಸೇವೆ ಒದಗಿಸಲು ನಮ್ಮ ತಂಡ ಸಿದ್ಧವಿದೆ’ ಎಂದು ಮೈಸೂರು ನಗರಿಗರಿಗೆ ಟಿ.ಎಸ್.ಶ್ರೀವತ್ಸ ಮನವಿ ಮಾಡಿದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ ಸಂಪರ್ಕಿಸಬೇಕಾದವರ ಮೊಬೈಲ್‌ ಸಂಖ್ಯೆ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀವತ್ಸ, ‘ಸಂಜೆಯೊಳಗೆ ಅಲ್ಲಿಯೂ ಸೇವೆ ಸಲ್ಲಿಸುವ ಕಾರ್ಯಕರ್ತರ ಮೊಬೈಲ್‌ ನಂಬರ್ ನೀಡುತ್ತೇವೆ’ ಎಂದು ತಿಳಿಸಿದರು.

ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ವಿಭಾಗ ಪ್ರಮುಖ್ ಮೈ.ವಿ.ರವಿಶಂಕರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಪಾಲಿಕೆಯ ವಿರೋಧ ಪಕ್ಷದ ನಾಯಕ ಸುಬ್ಬಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.