
ಮೈಸೂರು: ‘ಬಿಜೆಪಿಯಲ್ಲಿ ವೀರಶೈವ–ಲಿಂಗಾಯತರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಅಲ್ಲದೇ ಕೆಲವು ಲೋಪಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರ ಉಳಿಯಬೇಕಾಗುತ್ತದೆ’ ಎಂದು ಮುಖಂಡರು ಎಚ್ಚರಿಸಿದ್ದಾರೆ.
ಹೋಟೆಲ್ ಗ್ರೀನ್ ಹೆರಿಟೇಜ್‌ನಲ್ಲಿ ಶುಕ್ರವಾರ ನಡೆದ ಮೈಸೂರು ನಗರ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆಯ ವೀರಶೈವ ಲಿಂಗಾಯತ ಬಿಜೆಪಿ ಮುಖಂಡರ ಚಿಂತನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
‘ಪಕ್ಷದ ರಾಜ್ಯದ ಪ್ರಧಾನ ಕಾರ್ಯದರ್ಶಿ, ಮೈಸೂರು ಜಿಲ್ಲೆಯ ಉಸ್ತುವಾರಿ ಪ್ರೀತಂಗೌಡ ಅವರು ವೀರಶೈವ–ಲಿಂಗಾಯತ ಸಮುದಾಯದ ಮುಖಂಡರ ಬಗ್ಗೆ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಾಂಗ್ರೆಸ್ ಪರವಾಗಿ ಈ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಅವರನ್ನು ಜವಾಬ್ದಾರಿಯಿಂದ ತೆಗೆದು, ಬೇರೆ ಉಸ್ತುವಾರಿಯನ್ನು ನೇಮಿಸಬೇಕು’ ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಒತ್ತಾಯಿಸಿದರು.
‘ಜಿಲ್ಲೆಯ ಸಕ್ರಿಯ ಪದಾಧಿಕಾರಿಗಳ ಸಲಹೆ ತೆಗೆದುಕೊಳ್ಳದೆ, ಪಕ್ಷದ ಬಾವುಟ ಹಿಡಿಯದ ನಮ್ಮ ಸಮುದಾಯದ ಕೆಲವು ಮುಖಂಡರ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಅವರನ್ನು ಪ್ರೋತ್ಸಾಹಿಸಬಾರದು. ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು ಹೆಚ್ಚು ಮತದಾರರಿರುವ ನಮ್ಮ ಸಮುದಾಯದವರನ್ನು ಒಗ್ಗೂಡಿಸಿ ಪಕ್ಷ ಕಟ್ಟುವಲ್ಲಿ ವಿಫಲರಾಗಿದ್ದು, ಅವರಿಗೆ ಸರಿಯಾಗಿ ಸಂಘಟಿಸಲು ತಿಳಿಸುವುದು ಮತ್ತು ವಿಭಾಗ ಹಾಗೂ ಸಹ-ಪ್ರಭಾರಿಗಳ ನೇಮಕದಲ್ಲಿ ಸಮುದಾಯಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ವೀರಶೈವ–ಲಿಂಗಾಯತ ಸಮುದಾಯದ ಹಲವು ಬಿಜೆಪಿ ಪದಾಧಿಕಾರಿಗಳು ಪಕ್ಷದ ಜೊತೆ ಸಮಾಲೋಚಿಸಿ ವಿಷಯವನ್ನು ಸ್ಥಳೀಯ ಮುಖಂಡರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಾಜ್ಯ ಘಟಕದ ಅಧ್ಯಕ್ಷರು ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಮುಖಂಡರು ‘ಇದು ಪಕ್ಷದ ವಿರುದ್ಧದ ಸಭೆಯಲ್ಲ, ಪಕ್ಷದ ಸಂಘಟನೆ ಮತ್ತು ರಾಜ್ಯ ಘಟಕದ ಅಧ್ಯಕ್ಷರ ಕೈಬಲಪಡಿಸಲು ಪದಾಧಿಕಾರಿಗಳು ಇಚ್ಛಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೆ.ವಸಂತ ಕುಮಾರ್, ಬಿ.ಎಸ್. ಸದಾನಂದ, ಗುರುಸ್ವಾಮಿ, ಬಿ.ವಿ.ಮಂಜುನಾಥ್, ಖಂಡೇಶ್, ಶರತ್ ಪುಟ್ಟಬುದ್ದಿ, ಗೆಜ್ಜಗಳ್ಳಿ ಮಹೇಶ್, ಕೇಬಲ್ ಮಹೇಶ್, ಹೆಳವರಹುಂಡಿ ಸಿದ್ದಪ್ಪ, ಆಲನಹಳ್ಳಿ ಮಹದೇವಸ್ವಾಮಿ, ಉಮೇಶ್, ಕೀಳನಪುರ ಮಾದಪ್ಪ, ರಾಜಣ್ಣ, ಚಿಕ್ಕಹಳ್ಳಿ ಕುಮಾರ್, ಎನ್.ವಿ.ವಿನಯ್ ಕುಮಾರ್, ನಂದಿನಿ, ರೇಣುಕಾ ರಾಜು, ಪುಷ್ಪಾ, ದಾಕ್ಷಾಯಿಣಿ, ಸ್ವಪ್ನಾ ನಾಗೇಶ್, ಚಿಕ್ಕಕಾನ್ಯ ಶಿವಕುಮಾರ್, ದಯಾನಂದ ಪಟೇಲ್, ದಾರಿಪುರ ಚಂದ್ರಶೇಖರ್, ಸಂತೋಷ್, ಸಚಿನ್, ಷಡಕ್ಷರಿ, ದೂರ ವೃಷಭೇಂದ್ರ ಹಾಜರಿದ್ದರು.
ಸಭೆಯ ಪ್ರಮುಖ ಬೇಡಿಕೆಗಳು
*ಶೇ 85ರಷ್ಟು ಮತದಾರರು ಬಿಜೆಪಿ ಪರವಾಗಿದ್ದರೂ ಸರಿಯಾದ ಪ್ರಾತಿನಿಧ್ಯ ನೀಡದಿರುವುದು
* ಜಿಲ್ಲೆಯಲ್ಲಿ 3.80 ಲಕ್ಷ ಮತದಾರರಿದ್ದರೂ ಶಾಸಕ ತಾಲ್ಲೂಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡದೆ ತಾರತಮ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ನೀಡಬೇಕು.
* ಜಿಲ್ಲೆಯ ಪಕ್ಷದ ಕೋರ್ ಕಮಿಟಿಯಲ್ಲಿ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ನೀಡದೆ ಕಡೆಗಣಿಸಿರುವುದನ್ನು ಸರಿಪಡಿಸಬೇಕು.
* ನಿಗಮ-ಮಂಡಳಿಗಳಲ್ಲಿ ಸಮುದಾಯದ ಮುಖಂಡರನ್ನು ನಾಮನಿರ್ದೇಶನ ಮಾಡಲು ಕ್ರಮ ಕೈಗೊಳ್ಳುವುದು.
* ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಮುದಾಯದವರಿಗೆ ಹೆಚ್ಚಿನ ಸ್ಥಾನ ನೀಡಬೇಕು.
* ಸಮುದಾಯದ ಜನಸಂಖ್ಯೆ ಹೆಚ್ಚಿರುವ ವಾರ್ಡ್‌ಗಳ ಮೀಸಲಾತಿಯನ್ನು ಬದಲಾಯಿಸಲು ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.