ADVERTISEMENT

ಮೈಸೂರು ಮಹಾನಗರ ಪಾಲಿಕೆ: ಬಿಜೆಪಿಗೆ ಮೊದಲ ಬಾರಿ ಮೇಯರ್‌ಗಿರಿ!

ಪಟ್ಟು ಹಿಡಿದ ಜೆಡಿಎಸ್‌, ಕಾಂಗ್ರೆಸ್‌ಗೆ ಪೆಟ್ಟು l ಎರಡೂವರೆ ವರ್ಷದ ಮೈತ್ರಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 4:48 IST
Last Updated 26 ಆಗಸ್ಟ್ 2021, 4:48 IST
ಮೈಸೂರು ನಗರ ಪಾಲಿಕೆಯ ನೂತನ ಮೇಯರ್‌ ಆಗಿ ಬುಧವಾರ ಆಯ್ಕೆಯಾದ ಸುನಂದಾ ಫಾಲನೇತ್ರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಗೂ ಇತರರು ಅಭಿನಂದಿಸಿದರು.
ಮೈಸೂರು ನಗರ ಪಾಲಿಕೆಯ ನೂತನ ಮೇಯರ್‌ ಆಗಿ ಬುಧವಾರ ಆಯ್ಕೆಯಾದ ಸುನಂದಾ ಫಾಲನೇತ್ರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಗೂ ಇತರರು ಅಭಿನಂದಿಸಿದರು.   

ಮೈಸೂರು: ಸಾಂಸ್ಕೃತಿಕ ನಗರಿಯ ಮೇಯರ್‌ ಸ್ಥಾನ ಹಿಡಿಯಬೇಕೆಂಬ ಬಿಜೆಪಿಯ ಮೂರು ದಶಕಗಳ ಕಾಯುವಿಕೆಗೆ ಬುಧವಾರ ತೆರೆಬಿದ್ದಿದೆ. ಸುನಂದಾ ಫಾಲನೇತ್ರ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಗದ್ದುಗೆ ಏರಿದ್ದಾರೆ.

‘ಮೇಯರ್‌ ಸ್ಥಾನ ತಮಗೇ ಬೇಕು’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಟ್ಟು ಹಿಡಿದಿದ್ದು, ಬಿಜೆಪಿಗೆ ನೆರವಾಯಿತು. ಮೈತ್ರಿ ಮುಂದುವರಿಸಲು ನಡೆಸಿದ ಕಸರತ್ತು ಫಲ ನೀಡಲಿಲ್ಲ. ಹೀಗಾಗಿ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು. ಅತಿದೊಡ್ಡ ಪಕ್ಷ ಎನಿಸಿರುವ ಬಿಜೆಪಿ ಗೆಲುವಿನ ನಗು ಬೀರಿತು.

ಒಟ್ಟು ಚಲಾವಣೆಯಾದ 70 ಮತಗಳಲ್ಲಿ ಸುನಂದಾ 26 ಮತ ಪಡೆದರೆ, ಕಾಂಗ್ರೆಸ್‌ನ ಎಚ್‌.ಎಂ.ಶಾಂತ
ಕುಮಾರಿ ಮತ್ತು ಜೆಡಿಎಸ್‌ನ ಅಶ್ವಿನಿ ಅನಂತು ತಲಾ 22 ಮತ ಗಳಿಸಿದರು.

ADVERTISEMENT

ಮುರಿದ ಮೈತ್ರಿ: ಪಾಲಿಕೆಯಲ್ಲಿ ಐದು ವರ್ಷ ಜೊತೆಯಾಗಿ ಆಡಳಿತ ನಡೆಸಲು ಉಭಯ ಪಕ್ಷಗಳು 2018 ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಮೊದಲ ವರ್ಷ ಕಾಂಗ್ರೆಸ್‌, ಎರಡನೇ ವರ್ಷ ಜೆಡಿಎಸ್‌ಗೆ ಮೇಯರ್‌ ಸ್ಥಾನ ಲಭಿಸಿತ್ತು. ಒಪ್ಪಂದದಂತೆ ಮೂರನೇ ವರ್ಷ ಕಾಂಗ್ರೆಸ್‌ಗೆ ಸಿಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆದ ಗೊಂದಲದಿಂದ ಜೆಡಿಎಸ್‌ಗೆ ಒಲಿದಿತ್ತು. ಆ ಸಂದರ್ಭದಲ್ಲೇ ಮೈತ್ರಿಯಲ್ಲಿ ಬಿರುಕು ಮೂಡಿತ್ತು. ಈಗ ಸಂಪೂರ್ಣ ಮುರಿದುಬಿದ್ದಿದೆ.

ಚುನಾವಣೆ ಸಭೆ ಬುಧವಾರ ಮಧ್ಯಾಹ್ನ 12ಕ್ಕೆ ನಿಗದಿಯಾಗಿತ್ತು. ‘ಮೂವರು ನಾಮಪತ್ರ ಸಲ್ಲಿಸಿದ್ದು, ವಾಪಸ್‌ ಪಡೆಯಲು ಐದು ನಿಮಿಷ ಕಾಲಾವಕಾಶ ನೀಡಲಾಗುವುದು’ ಎಂದು ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತ ಡಿ.ಜಿ.ಪ್ರಕಾಶ್ ತಿಳಿಸಿದರು. ಆಗ ತನ್ವೀರ್‌ ಸೇಠ್‌ ಅವರು ವಿಧಾನಪರಿಷತ್‌ ಸದಸ್ಯ, ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಬಳಿ ತೆರಳಿ ಮಾತುಕತೆ ನಡೆಸಿದರು. ಮೈತ್ರಿ ಉಳಿಸಿಕೊಳ್ಳಲು ಕೊನೆಯ ಕ್ಷಣದ ಪ್ರಯತ್ನ ನಡೆಸಿದರೂ ಯಶ ಕಾಣಲಿಲ್ಲ.

ತಮ್ಮ ಅಭ್ಯರ್ಥಿಗೆ ಜೆಡಿಎಸ್‌ನವರು ಬೆಂಬಲ ಸೂಚಿಸದೇ ಇದ್ದಾಗ ಆಕ್ರೋಶಗೊಂಡ ಕಾಂಗ್ರೆಸ್‌ ಸದಸ್ಯರು ಚುನಾವಣೆ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ‘ಮೈತ್ರಿ ದ್ರೋಹಿ ಜೆಡಿಎಸ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು, ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಮೊಳಗಿಸಿದರು.

ಸಭೆಯಲ್ಲಿ ಯಾವುದೇ ಘೋಷಣೆ ಕೂಗದ ಜೆಡಿಎಸ್‌ ಸದಸ್ಯರು, ಹೊರಗೆ ಬಂದ ಬಳಿಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ‘ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣ, ಅಧಿಕಾರ ಲಾಲಸೆಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ಎಲ್ಲರಿಗೂ ಅಧಿಕಾರ: ಮೇಯರ್‌ ಸ್ಥಾನ ಬಿಜೆಪಿಗೆ ಸಿಕ್ಕಿದ್ದರಿಂದ ಇದೀಗ ಪಾಲಿಕೆಯಲ್ಲಿ ಎಲ್ಲ ಮೂರು ಪಕ್ಷಗಳಿಗೆ ಅಧಿಕಾರ ಸಿಕ್ಕಂತಾಗಿದೆ. ಕಾಂಗ್ರೆಸ್‌ ಬಳಿ ಉಪಮೇಯರ್‌ ಸ್ಥಾನ (ಅನ್ವರ್ ಬೇಗ್‌) ಹಾಗೂ 2 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಇದೆ. ಇನ್ನೆರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಜೆಡಿಎಸ್‌ ಬಳಿಯಿದೆ.

ಜಿಟಿಡಿ ಕಾರಣರಾದರೇ?: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ ಬಿಟ್ಟು, ಕಾಂಗ್ರೆಸ್‌ ಸೇರುವ ಸುಳಿವು ನೀಡಿದ್ದು ಕೂಡಾ ಪಾಲಿಕೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಮುರಿಯಲು ಕಾರಣವಾಯಿತು ಎನ್ನಲಾಗಿದೆ.

‘ಜಿ.ಟಿ.ದೇವೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮೈಸೂರು ಭಾಗದಲ್ಲಿ ಜೆಡಿಎಸ್‌ನ ಶಕ್ತಿ ಕುಗ್ಗಿಸಲು ಕಾಂಗ್ರೆಸ್‌ ಮುಂದಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅವರೊಂದಿಗೆ ಮೈತ್ರಿ ಸಾಧ್ಯವಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸಾ.ರಾ.ಮಹೇಶ್‌ಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಎಲ್ಲರ ಜೊತೆಗೂಡಿ ಕೆಲಸ’: ‘ಬಿಜೆಪಿಯ ಮೊದಲ ಮೇಯರ್‌ ಆಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಪಾಲಿಕೆಯ ಎಲ್ಲ 65 ಸದಸ್ಯರ ಜತೆಗೆ ಕೆಲಸ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಅವರ ನೆರವಿನೊಂದಿಗೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ನೂತನ ಮೇಯರ್‌ ಸುನಂದಾ ಫಾಲನೇತ್ರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಹಿರಿಯ ಸದಸ್ಯೆಯಾಗಿರುವ 62 ವರ್ಷದ ಅವರು ಒಟ್ಟು ಐದು ಸಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 1996, 2008 ಮತ್ತು 2018 ರಲ್ಲಿ ಗೆಲುವು ದೊರೆತಿದೆ. ರಾಜಕೀಯಶಾಸ್ತ್ರದಲ್ಲಿ ಎಂ.ಎ ಪದವಿ ‍ಪಡೆದಿದ್ದಾರೆ. ಅವರ ಪತಿ ನಿವೃತ್ತ ಎಇಇ ಆಗಿದ್ದಾರೆ.

ಮತಗಳಿಕೆ ವಿವರ: 65 ಸದಸ್ಯ ಬಲದ ಪಾಲಿಕೆಯಲ್ಲಿ 64 ಸದಸ್ಯರಿದ್ದಾರೆ. ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿದೆ. ಶಾಸಕರು, ವಿಧಾನಪರಿಷತ್‌ ಸದಸ್ಯರು ಮತ್ತು ಸಂಸದ ಸೇರಿ ಒಟ್ಟು 72 ಮತಗಳಿವೆ. ಎಂಎಲ್‌ಸಿ ಸಂದೇಶ್‌ ನಾಗರಾಜು ಮತ್ತು ಶಾಸಕ ಜಿ.ಟಿ.ದೇವೇಗೌಡ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ಬಿಜೆಪಿಯ 22 ಸದಸ್ಯರು, ಶಾಸಕರಾದ ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್‌, ಸಂಸದ ಪ್ರತಾಪ ಸಿಂಹ ಮತ್ತು ಪಕ್ಷೇತರ ಸದಸ್ಯ ಮ.ವಿ.ರಾಮಪ್ರಸಾದ್‌ ಸುನಂದಾ ಅವರನ್ನು ಬೆಂಬಲಿಸಿದರು.

ಕಾಂಗ್ರೆಸ್‌ನ 19 ಸದಸ್ಯರು, ಶಾಸಕ ತನ್ವೀರ್‌ ಸೇಠ್‌ ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಶಾಂತಕುಮಾರಿ ಪರ ಮತ ಚಲಾಯಿಸಿದರು. ಜೆಡಿಎಸ್‌ನ 17 ಸದಸ್ಯರು, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಒಬ್ಬರು ಬಿಎಸ್‌ಪಿ ಸದಸ್ಯರು ಹಾಗೂ ಇಬ್ಬರು ಪಕ್ಷೇತರರು ಅಶ್ವಿನಿ ಅನಂತು ಪರ ಮತ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.