ADVERTISEMENT

ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ

ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 11:16 IST
Last Updated 30 ಜುಲೈ 2022, 11:16 IST
ಹರ್ಷವರ್ಧನ್
ಹರ್ಷವರ್ಧನ್   

ಮೈಸೂರು: ‘ಪ್ರವೀಣ್‌ ನೆಟ್ಟಾರು ಹತ್ಯೆ ನಡೆದಿರುವುದು ನೋವಿನ ವಿಚಾರ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೆ, ಎರಡು ಮುಖ್ಯ ಜವಾಬ್ದಾರಿಗಳಿರುತ್ತವೆ. ಸಾರ್ವಜನಿಕರ ಜೀವ ಕಾಪಾಡುವ ಜತೆಗೆ ಕಾನೂನು–ಸುವ್ಯವಸ್ಥೆ ಕಾಪಾಡುವುದು ಪ್ರಮುಖವಾಗುತ್ತದೆ. ಆ ಕೆಲಸ ಮಾಡದಿದ್ದರೆ, ಅಂತಹ ಸರ್ಕಾರ ಇದ್ದರೆಷ್ಟು, ಬಿಟ್ಟರೆಷ್ಟು?’ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್‌ ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದರು.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿ, ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

‘ಪಕ್ಷದಲ್ಲಿ ನಡೆದಿರುವ ಘಟನೆಗಳು ತೀವ್ರ ನೋವು ತಂದಿದೆ. ಆದರೆ, 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಹೊಸತಾಗಿ ಕಾನೂನು ಜಾರಿಗೆ ತಂದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ನಂಜನಗೂಡು, ಗುಂಡ್ಲುಪೇಟೆ ಕೇರಳದ ಗಡಿ ಭಾಗದಲ್ಲಿದ್ದು, ಇಂತಹ ಘಟನೆಗಳು ನಡೆಯುವುದಿಲ್ಲ ಎನ್ನುವುದಕ್ಕೆ ಗ್ಯಾರೆಂಟಿ ಏನಿದೆ? ಬಿಜೆಪಿ ಬೆಳೆಯಲು ಕಾರ್ಯಕರ್ತರ ಬೆವರು, ರಕ್ತ ಹರಿಸಿದ್ದಾರೆ. ಎಲ್ಲರನ್ನೂ ರಕ್ಷಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಒತ್ತಾಯಿಸಿದರು.‌

ADVERTISEMENT

ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌, ‘ರಾಜ್ಯದಲ್ಲಿ ನಮ್ಮನ್ನು ಉಳಿಸಿ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ. ಇದಕ್ಕಿಂತ ಅವಮಾನ ಮತ್ತೊಂದಿಲ್ಲ. ಮುಂದಿನ ದಶಕದಲ್ಲಿ ನಮ್ಮನ್ನು ಮನುಷ್ಯರನ್ನಾಗಿ ಉಳಿಸಿಕೊಳ್ಳಲು ಈ ಹೋರಾಟ ನಡೆಸುತ್ತಿದ್ದೇವೆ. ಈ ದೇಶ ಭಾರತವಾಗಿಯೇ ಇರಬೇಕೇ ಹೊರತು, ಪಾಕಿಸ್ತಾನ ಆಗಬಾರದು. ನಮ್ಮ ಜೀವಕ್ಕಿಂತ ಭಾರತಾಂಬೆಯ ಪಾದ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.