ADVERTISEMENT

ಚಾಮುಂಡೇಶ್ವರಿ ಕ್ಷೇತ್ರ: ವಿಜಯಶಂಕರ್ ಬಿರುಸಿನ ಪ್ರಚಾರ

ಬಿಜೆಪಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 4:49 IST
Last Updated 14 ಏಪ್ರಿಲ್ 2019, 4:49 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರು ನಗರದ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರು ನಗರದ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರು ನಗರದ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು.

ಬೋಗಾದಿ ದಾಸನ ಕೊಪ್ಪಲು, ಮರಟಿ ಕ್ಯಾತನಹಳ್ಳಿ, ಗಣಗರ ಹುಂಡಿ, ಸಾಹುಕಾರ್ ಹುಂಡಿ ಬಸವನ ಪುರ ಬೆಳವಾಡಿ ಸೇರಿದಂತೆ 18 ಗ್ರಾಮಗಳಲ್ಲಿ ಮತಯಾಚಿಸಿದರು.

ಈ ವೇಳೆ ಅವರು ಮಾತನಾಡಿ, ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯಬೇಕಾದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ತೊಲಗಬೇಕು. ಅದಕ್ಕಾಗಿ ಮೈಸೂರು, ಮಂಡ್ಯ, ಹಾಸನ ಹಾಗೂ ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅಲ್ಲದೇ, ಮೈಸೂರು ಕ್ಷೇತ್ರದ ಬ್ಯಾಲೆಟ್ ಪೇಪರ್‌ನಲ್ಲಿ ಜೆಡಿಎಸ್ ನ ಚಿಹ್ನೆ ಇರುವುದಿಲ್ಲ. ಕಾಂಗ್ರೆಸ್‌ನ ಹಸ್ತ ಮಾತ್ರ ಇರುತ್ತದೆ. ಹಾಗಾಗಿ, ನೀವು ಕೊಡುವ ಒಂದೊಂದು ಮತವು ಜೆಡಿಎಸ್ ಪಕ್ಷಕ್ಕೆ ಕೊಟ್ಟ ಹಾಗೇ’ ಎಂದು ಹೇಳಿದರು.

ADVERTISEMENT

ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ. ಸಂವಿಧಾನದ ಪ್ರತಿಗಳನ್ನು ಸುಡುತ್ತಾರೆ. ಅಂಬೇಡ್ಕರ್ ಪ್ರತಿಮೆಗಳನ್ನು ದ್ವಂಸ ಮಾಡಲು ಕರೆ ನೀಡುತ್ತಾರೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ಇಂತಹವರನ್ನು ಅಧಿಕಾರದಿಂದ ದೂರವಿಡ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಹಿಂದುಳಿದವರಿಗಾಗಲಿ, ಅಲ್ಪಸಂಖ್ಯಾತರಿಗಾಗಲಿ ಒಂದು ಸೀಟೂ ನೀಡಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರು ಬಿಜೆಪಿ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮತ ಚಲಾಯಿಸಬಾರದು. ನೀವು ನನ್ನನ್ನು ಗೆಲ್ಲಿಸಿದರೇ ನಾನು ಮೈಸೂರಿನಲ್ಲಿ ಸಾರ್ವಜನಿಕರಿಗಾಗಿ ವಿಶೇಷ ಕಚೇರಿ ಸ್ಥಾಪಿಸಿ, ಪ್ರತಿ ಸೋಮವಾರ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಶೀಲಿಸುತ್ತೇನೆ. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನಿಗಾ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಎಪಿಎಂಸಿ ಅಧ್ಯಕ್ಷ ಕೆ.ಪ್ರಭುಸ್ವಾಮಿ, ಜಿಪಂ ಸದಸ್ಯರಾದ ರಾಕೇಶ್, ಪಾಪಣ್ಣ, ಅರುಣ್ ಕುಮಾರ್, ಮುಖಂಡರಾದ ಸಿ.ಎನ್.ಮಂಜೇಗೌಡ, ಡಾ.ಪ್ರಕಾಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಮಂಜುಳಾ ಮಾನಸ, ಕೃಷ್ಣಕುಮಾರ್, ಸಾಗರ್ ಹಾಗೂ ಜಿಲ್ಲಾ ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಜಯರಾಮೇಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.