ಮೈಸೂರು: ‘ಭ್ರಷ್ಟಾಚಾರದ ಕಳಂಕ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಅನೇಕ ಬಗೆಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರೆ, ನಟಿ ಮಾಳವಿಕಾ ಅವಿನಾಶ್ ತಿಳಿಸಿದರು.
ನಗರದ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮಹಾನಗರ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲಾಗುವುದು. ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವವರೆಗೂ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಖಜಾನೆ ಖಾಲಿ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಾಗಿ ಪರಿಶಿಷ್ಟರ ಹಣವನ್ನೂ ಬಳಸಿಕೊಂಡು ದ್ರೋಹವೆಸಗಿದ್ದಾರೆ. ಅಹಿಂದ ಹೆಸರೇಳಿ ಅಧಿಕಾರಕ್ಕೆ ಬಂದವರು ಆ ಸಮುದಾಯಗಳನ್ನು ವಂಚಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಮುಡಾ ಹಗರಣ ದೇಶದಾದ್ಯಂತ ಸುದ್ದಿಯಾಗಿದೆ. ಸಿಎಂ ತವರಲ್ಲೇ ದೊಡ್ಡ ಹಗರಣ ಬಯಲಾಗಿದೆ’ ಎಂದು ದೂರಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ‘ಮುಡಾ ಹಗರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಿದ್ದರೆ ₹ 5ಸಾವಿರ ಕೋಟಿ ರಾಜ್ಯದ ಖಜಾನೆ ಸೇರುತ್ತಿತ್ತು. ಆದರೆ, ಸೂಕ್ತವಾಗಿ ತನಿಖೆ ನಡೆಸದೆ ಹಗರಣವನ್ನು ಒಪ್ಪಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಪಕ್ಷದ ಕಾರ್ಯಕರ್ತರು ವ್ಯಕ್ತಿ ಪೂಜೆ ಮಾಡಬಾರದು. ಗುಂಪುಗಾರಿಕೆಗಳಿಗೆ ತಲೆ ಹಾಕಬೇಡು. ಪಕ್ಷದಿಂದ ತೊಂದರೆ ಆಗಿದ್ದರೆ ನೇರವಾಗಿ ಪಕ್ಷದ ನಾಯಕರನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬೇಕು’ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ.ಎಚ್. ವಿಜಯಶಂಕರ್ ಅವರನ್ನು ಅಭಿನಂದಿಸಲಾಯಿತು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿದರು. ಶಾಸಕ ಟಿ.ಎಸ್. ಶ್ರೀವತ್ಸ, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಡಾ.ಅನಿಲ್ ಥಾಮಸ್, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಮುಖಂಡರಾದ ಅಪ್ಪಣ್ಣ, ಶಿವಕುಮಾರ್, ಸಂದೇಶ್ ಸ್ವಾಮಿ, ಮಂಜುನಾಥ್, ಗೋಪಾಲ್ ರಾವ್ ಪಾಲ್ಗೊಂಡಿದ್ದರು.
ಮುಂಬರುವ ನಗರಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಶ್ರಮಿಸಬೇಕು. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದರೆ ಉತ್ತಮ ಅವಕಾಶಗಳು ಸಿಗುತ್ತವೆಎಲ್. ನಾಗೇಂದ್ರ ಅಧ್ಯಕ್ಷ ಬಿಜೆಪಿ ನಗರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.