ADVERTISEMENT

ಕೋಮು ದ್ವೇಷ ಹರಡಲು ಬಿಜೆಪಿ ನಾಯಕರಿಂದ ಪ್ರಚೋಚನೆ: ಲಕ್ಷ್ಮಣ ಆರೋಪ

ಆರೋಪಿ ಜೊತೆ ಬಿಜೆಪಿ: ಸ್ಪಷ್ಟನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 13:22 IST
Last Updated 26 ಜುಲೈ 2022, 13:22 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಮುಸ್ಲಿಂ ಯುವಕನ ಹೆಸರಿನಲ್ಲಿ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೊಡಗಿನ ಆರೋಪಿಯೊಬ್ಬ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕು’ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.

‘ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಕುರಿತು ಅಸಹ್ಯವಾಗಿ ಪೋಸ್ಟ್‌ ಮಾಡಿ ಕೋಮುದ್ವೇಷವನ್ನು ಜನರಲ್ಲಿ ಬಿತ್ತಿರುವ ವಿರಾಜಪೇಟೆ ತಾಲ್ಲೂಕಿನ ಆರೋಪಿಗೆ ಸ್ಥಳೀಯ ಬಿಜೆಪಿ ನಾಯಕರೇ ಪ್ರಚೋದನೆ ನೀಡಿದ್ದಾರೆ. ಕೋಮು ಗಲಭೆ ಸೃಷ್ಟಿಸಿ, ಮತ ರಾಜಕಾರಣ ಮಾಡುವುದಕ್ಕಾಗಿಯೇ ಕೃತ್ಯ ಎಸಗಲಾಗಿದೆ’ ಎಂದುಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಚಿವೆ ವಜಾಗೊಳಿಸಿ: ‘ಪರವಾನಗಿ ಇಲ್ಲದೆ ರೆಸ್ಟೊರೆಂಟ್‌ ನಡೆಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಝೋಯಿಶ್‌ಇರಾನಿ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ, ಅಮಾನತು ಮಾಡಲಾಗಿದೆ. ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಹೋಟೆಲ್‌ನಲ್ಲಿ ಕೊಡಲಾಗುತ್ತಿದ್ದ ಗೋಮಾಂಸದ ಬಗ್ಗೆ ಹೇಳಿಕೆ ನೀಡಲಿ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಸಂಪುಟದಿಂದ ಸ್ಮೃತಿ ಇರಾನಿ ಅವರನ್ನು ಕೈಬಿಡಬೇಕು’ ಎಂದು ಲಕ್ಷ್ಮಣ ಒತ್ತಾಯಿಸಿದರು.

ADVERTISEMENT

‘ಬಿಜೆಪಿ ಸರ್ಕಾರಕ್ಕೆ ಇದುವರೆಗೂ ಒಂದು ಅಣೆಕಟ್ಟು ಕಟ್ಟಲು ಆಗಿಲ್ಲ. ಆದರೆ, ಗಣಿಗಾರಿಕೆ ನಡೆಸಿದರೆ ಕೆಆರ್‌ಎಸ್‌ ಅಣೆಕಟ್ಟೆಗೆ ಹಾನಿಯಾಗುವುದೇ ಎಂಬುದನ್ನು ತಿಳಿಯುವುದಕ್ಕಾಗಿ ಪರಿಕ್ಷಾರ್ಥ ಸ್ಫೋಟ ನಡೆಸಲು ಮುಂದಾಗಿರುವುದು ಘೋರ ಅಪರಾಧ. ಅಣೆಕಟ್ಟೆ ಒಂದು ಬಂಡೆ ಮೇಲೆ ನಿಂತಿದೆ. ಅದಕ್ಕೆ ಹಾನಿಯಾದರೆ ಬೆಂಗಳೂರಿಗೆ ಕುಡಿಯುವ ನೀರು ಸಿಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಶಿವಣ್ಣ, ಮೈಸೂರು ಬಸವಣ್ಣ, ಮಹೇಶ್‌ ಇದ್ದರು.

‘ಸಂಸದರೇ ಸುಳ್ಳು ಹೇಳಬೇಡಿ’:‘ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನ.17, 2015ರಲ್ಲೇ ಸಿದ್ದರಾಮಯ್ಯ ಸರ್ಕಾರವು ಸಂಪುಟದಲ್ಲಿ ತೀರ್ಮಾನ ಕೈಗೊಂಡು ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಿತ್ತು. ಆದರೆ, ನಾಲ್ವಡಿ ಹೆಸರಿಟ್ಟಿದ್ದು ನಾನೇ ಎಂದು ಸಂಸದ ಪ್ರತಾಪಸಿಂಹ ಸುಳ್ಳು ಹೇಳುತ್ತಿದ್ದಾರೆ’ ಎಂದು ಲಕ್ಷ್ಮಣ ಹೇಳಿದರು.

‘ಸಂಸದರು ಇದುವರೆಗೂ ಯಾವ ಯೋಜನೆಯನ್ನು ತಂದಿಲ್ಲವೆಂದು ಸತ್ಯ ಹೇಳಿದರೆ ಪೊಲೀಸರಿಗೆ ದೂರು ನೀಡುವುದೇ ಅವರ ಕಾಯಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.