ADVERTISEMENT

ಕುಸಿಯುತ್ತಿದೆ ರಕ್ತ ಸಂಗ್ರಹ

ರಕ್ತಸಂಗ್ರಹಕ್ಕಾಗಿ ಸಮರೋಪಾದಿ ಕ್ರಮಕ್ಕೆ ಮುಂದಾದ ರಕ್ತನಿಧಿ ಕೇಂದ್ರ

ಕೆ.ಎಸ್.ಗಿರೀಶ್
Published 28 ಏಪ್ರಿಲ್ 2021, 7:44 IST
Last Updated 28 ಏಪ್ರಿಲ್ 2021, 7:44 IST

ಮೈಸೂರು: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಕ್ತದಾನಿಗಳು ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಗಳೂ ಸಹ ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ಆಯೋಜಿಸುತ್ತಿಲ್ಲ. ಹೀಗಾಗಿ, ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿರುವ ಸರ್ಕಾರಿ ರಕ್ತನಿಧಿ ಕೇಂದ್ರದಲ್ಲಿ ರಕ್ತ ಸಂಗ್ರಹದ ಪ್ರಮಾಣ ದಿನೇದಿನೇ ಕುಸಿಯುತ್ತಿದೆ.

‌ಸದ್ಯ, ರಕ್ತನಿಧಿ ಕೇಂದ್ರದಲ್ಲಿ 190 ಯೂನಿಟ್‌ನಷ್ಟು (ಪೌಚ್‌) ರಕ್ತ ಮಾತ್ರವೇ ಇದೆ. ದಿನವೊಂದಕ್ಕೆ ಕನಿಷ್ಠ ಎಂದರೂ 30ರಿಂದ 35 ‍ಯೂನಿಟ್‌ನಷ್ಟು ರಕ್ತ ಇಲ್ಲಿಗೆ ಬರುತ್ತಿತ್ತು. ಆದರೆ, ಈಗ ಇದರ ಪ್ರಮಾಣ 6ರಿಂದ 8 ಯೂನಿಟ್‌ಗೆ ಇಳಿಕೆಯಾಗಿದೆ. ಸಂಗ್ರಹ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದರಿಂದ ಕೆ.ಆರ್.ಆಸ್ಪತ್ರೆ ಬಿಟ್ಟು ಹೊರಗಿನ ಖಾಸಗಿ ಆಸ್ಪತ್ರೆಗಳಿಗೆ ರಕ್ತ ನೀಡದಿರಲು ನಿರ್ಧರಿಸಲಾಗಿದೆ.‌

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಮಂಜುನಾಥ್, ‘ರಕ್ತ ನೀಡುವವರ ಪ್ರಮಾಣ ಕೋವಿಡ್‌ ಹೆಚ್ಚಾಗುತ್ತಿದ್ದಂತೆ ಕಡಿಮೆಯಾಗಿದೆ. ಕೊರತೆ ನೀಗಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ ಹುಣಸೂರಿನಲ್ಲಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ವತಿಯಿಂದ ಶಿಬಿರವನ್ನು ಆಯೋಜಿಸಿ 70 ಯೂನಿಟ್‌ನಷ್ಟು ರಕ್ತವನ್ನು ಸಂಗ್ರಹಿಸಲಾಯಿತು. ಏಪ್ರಿಲ್ 28ರಂದು ಸಿಐಐ ಹಾಗೂ ಇನ್ನಿತರ ಸ್ವಯಂಸೇವಾ ಸಂಘಟನೆಗಳ ವತಿಯಿಂದ ಮೈಸೂರಿನಲ್ಲಿ ಶಿಬಿರವೊಂದು ನಡೆಯಲಿದೆ. ಶಿಬಿರಗಳ ಆಯೋಜಕರಿಗೆ ಈಗಾಗಲೇ ರಕ್ತ ಸಂಗ್ರಹ ಕಡಿಮೆಯಾಗುತ್ತಿರುವ ಕುರಿತು ಸಂದೇಶ ಕಳುಹಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ಇದೇ ಸಮಯದಲ್ಲಿ ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಮಾಡಲಾದ ‘ಲಾಕ್‌ಡೌನ್‌’ನಿಂದ ರಕ್ತ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಈ ಕುರಿತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಪ್ರಕಟಣೆ ಹೊರಡಿಸಿ, ರಕ್ತದಾನ ಮಾಡಲು ಯುವಕರು ಮುಂದೆ ಬರಬೇಕು ಎಂದು ಮನವಿಯನ್ನೂ ಮಾಡಿತ್ತು.

ಕಳೆದ ವರ್ಷಕ್ಕಿಂತ ಭಿನ್ನ

ಕಳೆದ ವರ್ಷಕ್ಕಿಂತ ಈಗಿನ ಸಂದರ್ಭ ಸಂಪೂರ್ಣ ಭಿನ್ನವಾಗಿದೆ. ಸಂಪೂರ್ಣ ಲಾಕ್‌ಡೌನ್‌ ಇದ್ದುದ್ದರಿಂದ ಅಪಘಾತಗಳ ಪ್ರಮಾಣವೂ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಈಗ ವಾಹನ ಸಂಚಾರಕ್ಕೆ ಮುಕ್ತ ಓಡಾಟ ಇರುವುದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇಲ್ಲ. ಇದರಿಂದ ಕಳೆದ ಬಾರಿಗಿಂತಲೂ ಹೆಚ್ಚಿನ ಗಂಭೀರ ಪರಿಸ್ಥಿತಿ ತಲೆದೋರುವ ಸಾಧ್ಯತೆಗಳಿವೆ ಎಂದು ಅಂದಾಜು ಮಾಡಲಾಗಿದೆ.

ಗರ್ಭೀಣಿ ಮಹಿಳೆಯರು, ತಲಸ್ಸೇಮಿಯಾ, ಸಿಕಲ್‌ಸೆಲ್, ಅನಿಮಿಯಾ, ಕ್ಯಾನ್ಸರ್ ಪೀಡಿತರು, ಡಯಾಲಿಸಿಸಸ್‌ಗೆ ಒಳಗಾಗುವವರು ಹಾಗೂ ತುರ್ತು ಶಸ್ತ್ರಚಿಕತ್ಸೆಗಳಿಗೂ ರಕ್ತದ ಅಗತ್ಯ ಬಹಳ ಇದೆ. ಒಂದು ವೇಳೆ ಸಕಾಲಕ್ಕೆ ರಕ್ತ ಸಿಗದಿದ್ದರೆ ಬದುಕುವುದೂ ಕಷ್ಟವಾಗುತ್ತದೆ.

ನಗರದಲ್ಲಿ ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಜತೆಗೆ, ಜೀವಧಾರಾ, ಅಪೊಲೊ, ಜೆಎಸ್‌ಎಸ್‌, ಚಂದ್ರಕಲಾ, ಕಾವೇರಿ, ಸೇಂಟ್‌ಜೋಸೆಫ್‌ ಹಾಗೂ ನಾರಾಯಣ ಹೃದಯಾಲಯಗಳಲ್ಲೂ ರಕ್ತನಿಧಿಗಳಿವೆ.

ರಕ್ತದಾನ ಮಾಡುವವರು, ರಕ್ತದಾನದ ಶಿಬಿರಗಳನ್ನು ಆಯೋಜಿಸುವ ಆಸಕ್ತರು ರಕ್ತನಿಧಿ ಕೇಂದ್ರದ ಸಂಖ್ಯೆ ದೂ: 0821– 2429800 ಸಂಪರ್ಕಿಸಬಹುದು.

ಮೇ 1ರಿಂದ ಮತ್ತಷ್ಟು ಕುಸಿಯುವ ಭೀತಿ

ಕೋವಿಡ್ ಲಸಿಕೆಯ ಮೊದಲ ಡೋಸೆಜ್‌ ಪಡೆದವರು ಮೊದಲ 4 ವಾರ, 2ನೇ ಡೋಸೇಜ್ ಪಡೆದವರು ನಂತರದ 4 ವಾರಗಳ ಕಾಲ ರಕ್ತದಾನ ಮಾಡಬಾರದು ಎಂಬ ನಿಯಮ ಇದೆ. ಇದುವರೆಗೂ ಕೋವಿಡ್‌ ಲಸಿಕೆ ಕೇವಲ 45 ವರ್ಷದ ಮೇಲ್ಪಟ್ಟವರಿಗೆ ಮಾತ್ರವೇ ಲಭ್ಯವಿತ್ತು. ಆದರೆ, ಮೇ 1ರಿಂದ ಕೋವಿಡ್‌ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೂ ನೀಡಲಾಗುತ್ತದೆ. ಇದರಿಂದ ರಕ್ತದಾನದ ಪ್ರಮಾಣ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.

ಲಸಿಕೆ ಪಡೆದ ರಕ್ತದಿಂದ ರೋಗಿಗೆ ಅಪಾಯ ಇಲ್ಲ!

ಕೋವಿಡ್ ಲಸಿಕೆ ಪಡೆದಿಲ್ಲ ಎಂದು ಸುಳ್ಳು ಹೇಳಿ ಒಂದು ವೇಳೆ ಯಾರಾದರೂ ರಕ್ತದಾನ ಮಾಡಿದರೆ ಅದರಿಂದ ರಕ್ತ ಪಡೆದವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಮಂಜುನಾಥ್ ಹೇಳುತ್ತಾರೆ.

‘ಕೋವಿಡ್ ಲಸಿಕೆ ತೆಗೆದುಕೊಂಡವರ ರಕ್ತವನ್ನು ಪಡೆದ ರೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಕೋವಿಡ್ ಲಸಿಕೆ ಪಡೆದವರಲ್ಲಿ ಉಂಟಾಗುವ ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ, ಕೋವಿಡ್ ಲಸಿಕೆ ಪಡೆಯುವುದಕ್ಕೆ ಮುನ್ನವೇ ರಕ್ತದಾನ ಮಾಡುವುದು ಸೂಕ್ತ’ ಎಂದು ಅವರು ಸಲಹೆ ನೀಡುತ್ತಾರೆ.

***

ನಿರ್ಭೀತಿಯಿಂದ ಜನರು ರಕ್ತದಾನ ಮಾಡಬಹುದು. ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ
ಡಾ.ಬಿ.ಎಸ್.ಮಂಜುನಾಥ್
ರಕ್ತನಿಧಿ ಕೇಂದ್ರದ ಮುಖ್ಯಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.