ಮೈಸೂರು: ‘ಸೃಜನಶೀಲ ಕೃತಿಯಲ್ಲಿ ಸಮಕಾಲೀನ ಒಳಗೊಳ್ಳುವಿಕೆ ಬಹು ಮುಖ್ಯ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಜೋಳಿಗೆ ಪ್ರಕಾಶನ ಮತ್ತು ಅಭ್ಯಾಸಿ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಮಂಜು ಕೋಡಿಉಗನೆ ಅವರ ‘ಬೋಧಿ ವೃಕ್ಷದ ಹಾಡು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸೃಜನಶೀಲ ಕೃತಿಗಳು ಓದುಗರಲ್ಲಿ ಸಹಾನುಭೂತಿ ಮತ್ತು ತಿಳಿವಳಿಕೆ ಉಂಟುಮಾಡುತ್ತವೆ. ಹೀಗಾಗಿ ಕೃತಿಗಳಲ್ಲಿ ವಿವಿಧ ಪ್ರಕಾರ ಅಭಿವ್ಯಕ್ತಗೊಳ್ಳಬೇಕು. ಇಲ್ಲಿ ವಿವೇಚನೆಯೂ ಮುಖ್ಯ. ಇಲ್ಲದಿದ್ದರೆ, ವಿಶಿಷ್ಟ ಗುರುತು ಕಳೆದುಕೊಳ್ಳುವ ಅಪಾಯ ಉಂಟಾಗಲಿದೆ’ ಎಂದರು.
‘ನಾಲಿಗೆ ಸತ್ತು ಹೋಗಿರುವ ಸಂದರ್ಭದಲ್ಲಿ ಎರಡು ಮಾತುಗಳನ್ನು ನೆಡಲು ಸಾಧ್ಯವಾಗಿಸಿದೆ. ಬೌದ್ಧಿಕ ಗುರುತು ಗುರುತಿಸಿದೆ. ಈ ಕಾಲಘಟ್ಟದಲ್ಲಿ ಹಲವು ಪ್ರಶ್ನೆಗಳನ್ನು ನಮ್ಮೊಳಗೆ ನಾವು ಕೇಳಿಕೊಳ್ಳಬೇಕಾದ ರೀತಿಯನ್ನು ಲೇಖಕರು ಕೃತಿಯಲ್ಲಿ ಮಂಡಿಸಿದ್ದಾರೆ. ಅಮೂಲ್ಯವಾದ ಒಳನೋಟವಿದೆ. ಬುದ್ಧ, ಅಂಬೇಡ್ಕರ್ ಈ ಸಂಕಲನದ ಸೂತ್ರ. ಅವರ ಪ್ರೀತಿ, ಕರುಣೆ, ಮೈತ್ರಿ, ತತ್ವಗಳನ್ನು ನೆನಪಿಸುವ ಹಲವು ಸಾಲುಗಳ ಒಟ್ಟು ಹಂದರವನ್ನು ಒಂದೇ ಮಾತಿನಲ್ಲಿ ತಿಳಿಸಿದ್ದಾರೆ’ ಎಂದು ವಿಶ್ಲೇಷಿಸಿದರು.
‘ಕವಿತೆಗಳಲ್ಲಿ ಚರಿತ್ರೆಯ ಅಂಶ ಕಾಣಿಸಿದ್ದಾರೆ. ದಲಿತ ಅಸ್ಮಿತೆ, ಪರಂಪರೆಯ ನೆನಪು, ಅನುಭವ ಹಾಗೂ ಸಂಘರ್ಷದ ಕಾಲಘಟ್ಟ ಮೂಡಿಸಿದ್ದಾರೆ. ತಣ್ಣಗಿನ ಬರವಣಿಗೆ, ಹಿಂದೆ ಇದ್ದಂತಹ ಮಾದರಿ ಕಾಣಬಹುದು. ತನಗೆ ತಾನೇ ಮನುಷ್ಯ ಮಾತನಾಡುವ ರೀತಿ ಇವೆ’ ಎಂದು ವಿವರಿಸಿದರು.
ಕೃತಿ ಕುರಿತು ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, ‘ಕೃತಿಯಲ್ಲಿ ಪರಂಪರೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ತಾತ್ವಿಕತೆ ಅಭಿವ್ಯಕ್ತಗೊಳಿಸಿದ್ದಾರೆ. ಲೇಖಕರು ತಮ್ಮ ಅನುಭವಕ್ಕೆ ಪುರಾವೆ ಒದಗಿಸಿದ್ದಾರೆ. ಹೊಸ ಚಿಂತನೆಯ ಅಸ್ಮಿತೆಯೊಂದನ್ನು ಹುಟ್ಟು ಹಾಕಿರುವುದು ವಿಶಿಷ್ಟವಾಗಿದೆ’ ಎಂದರು.
‘ಪ್ರಸ್ತುತ ದಲಿತ ಸಂವೇನೆಗಳು’ ಕುರಿತು ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ರವಿಕುಮಾರ್ ಬಾಗಿ, ‘ದಲಿತ ಸಂವೇದನೆ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಇದು ಎಲ್ಲ ಕ್ಷೇತ್ರಕ್ಕೂ ಸೇರಿದೆ. ಆದರೆ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸಿ, ಕುಬ್ಜಗೊಳಿಸಲಾಗುತ್ತಿದೆ. ಸಂವೇದನೆಯಿಂದ ಹುಟ್ಟಿದ ಕೆಲಸಗಳು ದಲಿತ ಚಳವಳಿಯ ಪರಿಕಲ್ಪನೆ ಒಳಗೊಂಡಿದೆ’ ಎಂದು ತಿಳಿಸಿದರು.
‘ನಾಲಿಗೆ ಜೊತೆಗೆ ಹೃದಯವೂ ಸತ್ತು ಹೋಗಿರುವ ಕಾಲದಲ್ಲಿ ನಾವಿದ್ದೇವೆ. ಇದೊಂದು ಕಳವಳದ ಸಂಗತಿ’ ಎಂದರು.
ಚಿಂತಕ ಬಿ.ಮಹೇಶ್ ಹರವೆ, ಲೇಖಕ ಮಂಜು ಕೋಡಿಉಗನೆ, ಅಭ್ಯಾಸಿ ಟ್ರಸ್ಟ್‌ನ ಕಿರಣ್ ಗಿರ್ಗಿ ಇದ್ದರು. ಚಾಮರಾಜನಗರದ ಎಸ್.ಜಿ. ಮಹಾಲಿಂಗ ಗಿರ್ಗಿ ಮತ್ತು ತಂಡದವರು ಸುಗಮ ಸಂಗೀತ ಗಾಯನ ನಡೆಸಿಕೊಟ್ಟರು.
ಕೃತಿ ಪರಿಚಯ ಕೃತಿ: ‘ಬೋಧಿ ವೃಕ್ಷದ ಹಾಡು’
ಲೇಖಕ: ಮಂಜು ಕೋಡಿಉಗನೆ
ಪ್ರಕಾಶನ: ಜೋಳಿಗೆ ಪ್ರಕಾಶನ
ದರ: ₹110 ಪುಟ: 88
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.