ADVERTISEMENT

10ರಂದು ‘ಸಕ್ಕರೆ ಕಾಯಿಲೆ ಪ್ರಶ್ನೆ? ಉತ್ತರ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 12:11 IST
Last Updated 7 ಆಗಸ್ಟ್ 2021, 12:11 IST

ಮೈಸೂರು: ‘ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ (ಆ.10) ಬೆಳಿಗ್ಗೆ 11 ಗಂಟೆಗೆ ಡಾ. ಎಸ್‌.ಪಿ.ಯೋಗಣ್ಣ ಅವರ ‘ಸಕ್ಕರೆ ಕಾಯಿಲೆ ಪ್ರಶ್ನೆ? ಉತ್ತರ’ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ತಿಳಿಸಿದರು.

‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್‌.ಮಂಜುನಾಥ್‌ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ವಸಂತಕುಮಾರ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಎಎಂಎ ಕನ್ನಡ ವೈದ್ಯ ಬರಹಗಾರರ ಬಳಗದ ಅಧ್ಯಕ್ಷ ಡಾ. ಎಂ.ಅಣ್ಣಯ್ಯ ಕುಲಾಲ್‌ ಉಳ್ತೂರು ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದುಅವರು ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಧುಮೇಹ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ಆರಂಭದಿಂದಲೇ ಸರಿಯಾಗಿ ನಿರ್ವಹಿಸದಿದ್ದರೆ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಹಲವು ವೈದ್ಯ ಸಾಹಿತ್ಯ ಕೃತಿಗಳನ್ನು ಬರೆದಿರುವ ಡಾ. ಎಸ್‌.ಪಿ.ಯೋಗಣ್ಣ ಅವರು, ಆಳವಾದ ಅಧ್ಯಯನ ಮಾಡಿ ಈ ಕೃತಿ ಹೊರ ತಂದಿದ್ದಾರೆ’ ಎಂದು ಹೇಳಿದರು.

ADVERTISEMENT

‘ಹೃದ್ರೋಗಿಗಳು, ಮಧುಮೇಹಿಗಳನ್ನು ಡಾ. ಯೋಗಣ್ಣ ಅವರು ಆಪ್ತಸಮಾಲೋಚನೆ ಮಾಡುತ್ತಾರೆ. ಆ ವೇಳೆ ರೋಗಿಗಳು ಕೇಳಿದ ಪ್ರಶ್ನೆಗಳು, ಅದಕ್ಕೆ ಸಂಬಂಧಿಸಿದ ಉತ್ತರವನ್ನು ದಾಖಲಿಸಿದ್ದಾರೆ. ಸರಳ, ಲವಲವಿಕೆಯಿಂದ ಕೂಡಿರುವ ಬರವಣಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಚಿತ್ರಗಳನ್ನೂ ಬಳಸಿಕೊಂಡಿದ್ದಾರೆ. ಎಲ್ಲರ ಮನೆಯಲ್ಲೂ ಇರಬೇಕಾದ ಕೃತಿಯಿದು’ ಎಂದರು.

ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶಕರಾದ ಟಿ.ಎಸ್‌.ಛಾಯಾಪತಿ, ಪ್ರತಿಭಾ ಮುರಳಿ, ವಕೀಲ ಎನ್‌.ಪಿ.ತಮ್ಮಣ್ಣೇಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.