ADVERTISEMENT

ಕಲೆ ಸಿದ್ಧಿಸಲು ಕಲಾವಿದರಿಗೆ ತಾಳ್ಮೆ ಅಗತ್ಯ: ನಾಗಭೂಷಣಸ್ವಾಮಿ ಅಭಿಪ್ರಾಯ

ಓ.ಎಲ್.ನಾಗಭೂಷಣಸ್ವಾಮಿ ಸಲಹೆ; ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ ಪರಿಷ್ಕೃತ ಆವೃತ್ತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:31 IST
Last Updated 14 ಜುಲೈ 2024, 15:31 IST
ಮೈಸೂರಿನ ಹಾರ್ಡ್ವಿಕ್‌ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನ ಅವರ ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ, ನಾಗೇಶ್‌ ವಿ.ಬೆಟ್ಟಕೋಟೆ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಹಾರ್ಡ್ವಿಕ್‌ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನ ಅವರ ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ, ನಾಗೇಶ್‌ ವಿ.ಬೆಟ್ಟಕೋಟೆ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಕಲೆ ಸಿದ್ಧಿಸಲು ಬೇಕಾದ ತಾಳ್ಮೆ ಈಗಿನ ಕಲಾವಿದರಿಗೆ ಇಲ್ಲವಾಗಿದೆ. ತಾತ್ಕಾಲಿಕ ಯಶಸ್ಸು ಮಾತ್ರವೇ ಮುಖ್ಯವಾಗಿದೆ. ಹೀಗಾದರೆ ಕಲಾವಿದನಲ್ಲಿನ ಕಲೆಯು ಬೆಳೆಯುವುದಿಲ್ಲ’ ಎಂದು ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಹಾರ್ಡ್ವಿಕ್‌ ಶಾಲೆ ಆವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಭಾನುವಾರ ರಂಗಕರ್ಮಿ ಪ್ರಸನ್ನ ಅವರ ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ ಕೃತಿಯ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದರು.

‘ಸೃಜನಶೀಲರು ತಮ್ಮ ಮಿತಿಗಳನ್ನು ದಾಟಬೇಕು. ಒಳಗಿರುವ ಕಲೆಯನ್ನು ವಿಸ್ತರಿಸಿಕೊಳ್ಳಬೇಕು. ಆಂಗಿಕ, ವಾಚಿಕ ಸೇರಿದಂತೆ ರಂಗಭೂಮಿ ಎಲ್ಲ ಕೌಶಲಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಟ ಮತ್ತು ಪಾತ್ರದ ನಡುವೆ ಎಷ್ಟು ಅಂತರ ಇರಬೇಕು, ಮಿತಿಗಳನ್ನು ದಾಟುವ ಬಗೆ ಹೇಗೆ? ರಂಗ ತಂತ್ರಜ್ಞರಾದ ಸ್ಟಾನಿಸ್ಲಾವಸ್ಕಿ, ಜೆರ್ಜಿ ಗ್ರೊಟೌಸ್ಕಿ, ಬರ್ಟೊಲ್ಟ್ ಬ್ರೆಕ್ಟ್ ಏನು ಹೇಳುತ್ತಾರೆ? ಭಾರತೀಯ ರಂಗ ಚಿಂತನೆಗಳೇನು? ಎಂಬುದರ ಬಗ್ಗೆ ಪ್ರಸನ್ನ ಕೃತಿಯು ವಿವರಿಸುತ್ತದೆ. ನಾಟಕ, ರಂಗಕೃತಿಯನ್ನು ಚಿಂತಿಸಲು ಬೇಕಾದ ಮೂಲ ಸಾಮಗ್ರಿಯನ್ನು ನೀಡುತ್ತದೆ’ ಎಂದರು.

‘ಈಚೆಗೆ ರಂಗಭೂಮಿಯ ಬಗ್ಗೆ ಗಂಭೀರ ಪುಸ್ತಕಗಳ ಬಗ್ಗೆ ಕಡಿಮೆಯಾಗುತ್ತಿರುವಾಗ ‍ಪ್ರಸನ್ನ ಅವರ ಪರಿಷ್ಕೃತ ಪುಸ್ತಕವು ಆ ಕೊರತೆಯನ್ನು ನೀಗಿಸಲಿದೆ. ನಟನಿಗೆ ತರಬೇತಿ ಕೊಡುವ ತಂತ್ರಜ್ಞನಿಗೆ ಬೇಕಾದ ಸಾಮಗ್ರಿಯನ್ನು ಕೃತಿಯು ಕೊಡುತ್ತದೆ. ಇದು 52 ಅಧ್ಯಾಯ ಹೊಂದಿದ್ದು, ಥಿಯರಿ ಹಾಗೂ ಪ್ರಾಯೋಗಿಕ ಅಂಶಗಳಿವೆ’ ಎಂದು ವಿವರಿಸಿದರು.

‘ಸೃಜನಶೀಲತೆಯನ್ನು ಕಾಪಾಡಲು ಶಕ್ತಿ ಹಾಗೂ ಸಮಯಬೇಕು. ಸೃಜನತ್ವಕ್ಕೆ ಅಡಚಣೆ ಹೊರಗಿನದಕ್ಕಿಂತ ನಮ್ಮೊಳಗೆ ಇರುತ್ತದೆ. ಹೀಗಾಗಿ ಕಲಾವಿದರಿಗೆ, ಸೃಜನಶೀಲರಿಗೆ ಸಾಧಿಸಲೇಬೇಕೆಂಬ ಮಹತ್ವಾಕಾಂಕ್ಷೆ ಬೇಕಾಗುತ್ತದೆ’ ಎಂದರು. 

‘ಕಾವ್ಯ ಹಾಗೂ ಲೋಕದ ಸತ್ಯ ಬೇರೆಯೇ ಇದೆ ಎಂಬುದು ಭಾರತೀಯ ತತ್ವ ಚಿಂತನೆಯಾಗಿದೆ. ವಾಸ್ತವ ಹಾಗೂ ಸತ್ಯಗಳ ವ್ಯತ್ಯಾಸವು ಕಲಾವಿದರಿಗೆ ಇರಬೇಕು. ಸತ್ಯದ ಕಣ್ಣಿಗೆ ಕಾಣದ ಮಗ್ಗಲನ್ನು ವಾಸ್ತವತೆ ಹೊಂದಿರುತ್ತದೆ. ಸತ್ಯದ ತೋರಿಕೆಗಳಿಗೆ ವಾಸ್ತವವನ್ನು ಒರಗಿಸಿ ನೋಡುವ ಕೌಶಲ ಸಿದ್ಧಿಸಿಕೊಳ್ಳಬೇಕು’ ಎಂದು ಹೇಳಿದರು. 

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ನಟನೆ ಎಂಬುದು ಪ್ರದರ್ಶನ ಆಧಾರಿತ ಕಲೆಯಲ್ಲ. ಅದಕ್ಕೆ ಕ್ರೀಡೆಯಂತೆ ಅಭ್ಯಾಸ ಮುಖ್ಯ. ನಟನೆಯಲ್ಲಿ ಯಶಸ್ಸು ಗಳಿಸಲು ಕ್ರಿಕೆಟಿಗ ಸಚಿನ್‌ರಂತೆ ಅಭ್ಯಾಸ ಮಾಡಬೇಕು. ಪೂರ್ವಾಭ್ಯಾಸದಿಂದಲೇ ನಟನೆ ಮೈಗೂಡುತ್ತದೆ’ ಎಂದು ಉದಾಹರಿಸಿದರು.

‘ಪತನಗೊಳ್ಳುತ್ತಿರುವ ಕಲಿಕಾ ರಂಗಭೂಮಿ’
ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ ‘ಕಲಿಕಾ ರಂಗಭೂಮಿಯು ಪತನವಾಗಿದೆ. ಬದ್ಧತೆಯಿಂದ ದುಡಿಯುವವರ ಸಂಖ್ಯೆಯೀಗ ವಿರಳವಾಗಿದೆ. ಹೀಗಾಗಿ ಕನ್ನಡ ರಂಗಭೂಮಿ ಕಟ್ಟುವವರಿಗೆ ಪ್ರೋತ್ಸಾಹ ಬೇಕಿದೆ’ ಎಂದು ಹೇಳಿದರು. ‘ರಂಗಭೂಮಿಗೆ ಪ್ರಾಯೋಜಕತ್ವ ಸಿಕ್ಕಿದ್ದರೂ ಅದು ಜಾತ್ರೆಯಂತಾಗುತ್ತಿದೆ. ರಂಗ ಚಟುವಟಿಕೆಗಳು ಸಾಮಾಜಿಕ ಚಳವಳಿಯ ಪ್ರಮುಖ ಅಭಿವ್ಯಕ್ತಿಯಾಗಿದ್ದು ಬಹುಮಾಧ್ಯಮ ಸಜ್ಜುಗೊಳಿಸಲು ನೆರವಾದ ಅದನ್ನು ಬಲ‍ಪಡಿಸಬೇಕಿದೆ’ ಎಂದರು.

ಪುಸ್ತಕ ವಿವರ

ಕೃತಿ: ‘ಇಂಡಿಯನ್‌ ಮೆಥೆಡ್‌ ಇನ್ ಆ್ಯಕ್ಟಿಂಗ್’ (ಪರಿಷ್ಕೃತ ಆವೃತ್ತಿ)

ಲೇಖಕ: ಪ್ರಸನ್ನ

ಪ್ರಕಾಶನ: ಆ್ಯಕ್ಟಿಂಗ್ ಶಾಸ್ತ್ರ

ಪುಟ: 316

ಬೆಲೆ: ₹400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.