
ಮೈಸೂರು: ಗನ್‌ಹೌಸ್ ಮುಂಭಾಗದ ಉದ್ಯಾನದ ಕುವೆಂಪು ಪ್ರತಿಮೆ ಬಳಿ ಕೆಂಪು ಪುಸ್ತಕ ಆಚರಣಾ ಸಮಿತಿಯು ಕೆಂಪು ಪುಸ್ತಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಪ್ರೊ. ಎನ್. ಎಸ್. ವೇಣು ಗೋಪಾಲ್ ‘ಅಮೆರಿಕನ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕ ಬಿಡುಗಡೆಗೊಳಿಸಿದರು.
‘ಅಮೆರಿಕನ್ ಸಾಮ್ರಾಜ್ಯಶಾಹಿ ಎಂದರೆ ನಿರಂತರ ಯುದ್ಧ, ಸಾವು- ನೋವು, ನಾಶ, ಸಂಪನ್ಮೂಲಗಳ ಪೋಲು ಎಂಬಂತಾಗಿದೆ. ಎಲ್ಲಾ ದೇಶಗಳ ಶೋಷಣೆ, ಲೂಟಿ ಮಾಡುತ್ತಿದೆ. ಇವನ್ನು ಮರೆಮಾಚಲು ಕೋಮುವಾದ, ಮತಾಂಧತೆ ಮುನ್ನೆಲೆಗೆ ತರಲಾಗುತ್ತಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತಿನ ಶತ್ರು’ ಎಂದು ದೂರಿದರು.
ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘1848 ಫೆ. 21 ರಂದು ಕಾರ್ಲ್‌ಮಾರ್ಕ್ಸ್ ಹಾಗೂ ಫೆಡ್ರಿಕ್ ಏಂಗಲ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆ ಪುಸ್ತಕ ಪ್ರಕಟವಾದ ದಿನವನ್ನು ಕೆಂಪು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪುಸ್ತಕ ಜಗತ್ತಿನ ದುಡಿವ ವರ್ಗದ ವಿಮೋಚನೆಯ ದಾರಿ ದೀಪ’ ಎಂದು ಹೇಳಿದರು.
ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಮೆಹಬೂಬ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ, ಅಣ್ಣಪ್ಪ, ಶ್ರೀಧರ್, ಕೃಷ್ಣ ಮೂರ್ತಿ, ಬಲರಾಂ, ಅಭಿ.ಬೀರೇಶ್ವರ್, ಬಸವಯ್ಯ, ಮೈಕೇಲ್, ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.