ಮೈಸೂರಿನಲ್ಲಿ ಮಂಗಳವಾರ ಆರಂಭವಾದ ಬೌದ್ಧ ಮಹಾ ಸಮ್ಮೇಳನ ಉದ್ಘಾಟಿಸಿದ ಮಯನ್ಮಾರ್‌ನ ಭಿಕ್ಕು ಪನಿಂದ ಸಯಡೋ ಅವರು ಬೌದ್ಧ ಧರ್ಮ ಸ್ವೀಕರಿಸಿದವರೊಂದಿಗೆ ಮಾತನಾಡಿದರು.
ಪ್ರಜಾವಾಣಿ ಚಿತ್ರ / ಅನೂಪ್ ರಾಘ ಟಿ.
ಮೈಸೂರು: ‘ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 500 ಕೋಟಿ ಅನುದಾನ ಒದಗಿಸಬೇಕು ಹಾಗೂ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಬೇಕು’ ಎಂಬುದು ಸೇರಿ ಹಲವು ಆಗ್ರಹಗಳನ್ನು ಇಲ್ಲಿ ಬುಧವಾರ ಮುಕ್ತಾಯವಾದ ಬೌದ್ಧ ಮಹಾಸಮ್ಮೇಳನದಲ್ಲಿ ಮಂಡಿಸಲಾಯಿತು.
ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು, ರಾಜ್ಯ ಅಂಬೇಡ್ಕರ್‌ವಾದಿ ಸಂಘ–ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧವಿಹಾರದ ಸಹಯೋಗದಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಡಿಸಲಾದ ನಿರ್ಣಯಗಳಿಗೆ, ಪಾಲ್ಗೊಂಡಿದ್ದ ಸಾವಿರಾರು ಮಂದಿ ಚಪ್ಪಾಳೆಗಳ ಮೂಲಕ ದನಿಗೂಡಿಸಿದರು. ಬುದ್ಧವಿಹಾರದ ಸಂಚಾಲಕ ಪುರುಷೋತ್ತಮ್ ‘ಪಂಚ ನಿರ್ಣಯ’ಗಳನ್ನು ಮಂಡಿಸಿದರು.
ಕೌಶಲ ಅಭಿವೃದ್ಧಿ ಕೇಂದ್ರ ಮಾಡಿ:
‘ನಾಡಗೀತೆಯಲ್ಲಿ ಮೊದಲು ಇದ್ದ ‘ಬೌದ್ಧರುದ್ಯಾನ’ ಪದವನ್ನು ಮತ್ತೆ ಸೇರಿಸಿ ಹಾಡುವಂತೆ ಕ್ರಮ ಕೈಗೊಳ್ಳಬೇಕು. ಬುದ್ಧವಿಹಾರ ಸ್ಥಾಪನೆಗೆ ಪ್ರತಿ ಜಿಲ್ಲಾ ಕೇಂದ್ರಕ್ಕೆ ಎರಡು ಎಕರೆ ಜಮೀನು ನೀಡಬೇಕು. ಬುದ್ಧಗಯಾ, ಲುಂಬಿನಿಗೆ ಹೋಗುವವರಿಗೆ ‘ಹಜ್ ಯಾತ್ರೆ’ ಮಾದರಿಯಲ್ಲಿ ಆರ್ಥಿಕ ನೆರವು ಒದಗಿಸಬೇಕು. ಅಂಬೇಡ್ಕರ್ ಭವನಗಳನ್ನು ಕೌಶಲ ಅಭಿವೃದ್ಧಿ ಕೇಂದ್ರವನ್ನಾಗಿಸಬೇಕು’ ಎಂದು ಒತ್ತಾಯಿಸಿದರು.
ಉರಿಲಿಂಗಿ ಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸಿದರೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಬೇಕೆಂದು ಸರ್ಕಾರದಿಂದ ನಡಾವಳಿಯಾಗಿದೆ ಎಂದು ತಿಳಿಸಿದರು.
‘ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪಿಸಬೇಕು. ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯ ದಕ್ಷಿಣ ಬುದ್ಧಗಯಾ ಟ್ರಸ್ಟ್‌ಗೆ ₹ 10 ಕೋಟಿ ಮಂಜೂರು ಮಾಡಬೇಕು’ ಎಂದು ಬೇಡಿಕೆ ಮಂಡಿಸಿದರು.
ಬೇಡಿಕೆ ಈಡೇರಿಸಲು ಯತ್ನ:
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಮನವಿಯನ್ನು ಪರಿಶೀಲಿಸಿ, ಆದಷ್ಟು ಬೇಡಿಕೆ ಈಡೇರಿಸಲಾಗುವುದು. ಸಮ ಸಮಾಜದ ನಿರ್ಮಾಣಕ್ಕೆ ಅಗತ್ಯವಾದುದನ್ನು ಮಾಡೋಣ’ ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪಾಲ್ಗೊಂಡಿದ್ದರು.
‘ಮಾನವ ಮೈತ್ರಿಯ ಪಯಣ– 2025’ ಅಂತರರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮದ ಅಂಗವಾಗಿ ಬುದ್ಧನ ಪ್ರತಿಮೆ ಎದುರು ನೂರಾರು ಮಂದಿ ಮೋಂಬತ್ತಿ ಬೆಳಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.