ADVERTISEMENT

ಎಲ್ಲಾ ಧರ್ಮಗಳು ಬೌದ್ಧ ತತ್ವದತ್ತ ಆಕರ್ಷಣೆ

‘ಯುವ ಮನಸ್ಸಿನ ನಡೆ...ಬುದ್ಧನೆಡೆಗೆ’ ಸಮ್ಮೇಳನದಲ್ಲಿ ಆನಂದ್‌ ಭಂತೇಜಿ ಮಾತು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 17:30 IST
Last Updated 9 ನವೆಂಬರ್ 2019, 17:30 IST

ಮೈಸೂರು: ‘ಹಿಂದೂ, ಕ್ರಿಶ್ಚಿಯನ್‌, ಇಸ್ಲಾಂ ಧರ್ಮದ ಯುವಕರು ಕೂಡ ಬೌದ್ಧ ತತ್ವದತ್ತ ಆಕರ್ಷಿತರಾಗುತ್ತಿರುವ ವಿದ್ಯಮಾನ ಗಮನಿಸುತ್ತಿದ್ದೇನೆ’ ಎಂದು ಬೆಂಗಳೂರಿನ ಮಹಾಭೋದಿ ಸೊಸೈಟಿಯ ಆನಂದ್‌ ಭಂತೇಜಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರ ಹಾಗೂ ಬೈಲುಕುಪ್ಪೆಯ 14ನೇ ಟಿಬೆಟಿಯನ್‌ ಕಾಲೇಜ್‌ ಸ್ಟೂಡೆಂಟ್ಸ್‌ ಕಾನ್ಫರೆನ್ಸ್‌ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ ‘ಯುವ ಮನಸ್ಸಿನ ನಡೆ... ಬುದ್ಧನೆಡೆಗೆ’ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೌದ್ಧ ಶಿಕ್ಷಣದತ್ತ ಎಲ್ಲಾ ಧರ್ಮಗಳು ಒಲವು ತೋರುತ್ತಿವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಬೌದ್ಧ ತತ್ವಗಳ ಕುರಿತು ಅರಿವು ಮೂಡಿಸಬೇಕು. ಧ್ಯಾನ, ಮೈತ್ರಿ ಇಂದು ಅವಶ್ಯಕ. ಜೀವನವನ್ನು ಹೇಗೆ ನೋಡಬೇಕು ಎಂಬುದನ್ನು ಬುದ್ಧನ ಚಿಂತನೆಗಳು ಹೇಳಿಕೊಡುತ್ತವೆ. ಬುದ್ಧನ ವಿಚಾರಗಳನ್ನು ತಿಳಿದುಕೊಳ್ಳುವುದು ಹಾಗೂ ಆಚರಣೆಗೆ ತರುವುದು ಎರಡೂ ಅಗತ್ಯ’ ಎಂದರು.

ADVERTISEMENT

ಆತ್ಮಹತ್ಯೆಗೆ ದಿನ ನಿಗದಿ ಮಾಡಿಕೊಂಡಿದ್ದ ಯುವತಿಯೊಬ್ಬಳು ವಾರಾಂತ್ಯದಲ್ಲಿ ದಮ್ಮ ಕಾರ್ಯಕ್ರಮಕ್ಕೆ ಬರುತ್ತಿದ್ದಳು. ಬುದ್ಧನ ವಿಚಾರಗಳಿಂದ ಪ್ರಭಾವಿತಳಾಗಿ ಹೇಗೆ ತನ್ನ ನಿರ್ಧಾರ ಬದಲಿಸಿಕೊಂಡಳು ಎಂಬುದನ್ನು ಉದಾಹರಣೆಯಾಗಿ ನೀಡಿದರು.

‘ಸಿದ್ಧಾರ್ಥ ಹೇಗೆ ಬುದ್ಧನಾದ’ ಎಂಬ ವಿಷಯ ಕುರಿತು ಮಾತನಾಡಿದ ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ, ‘ಕಂಡದ್ದನ್ನು ಮಾತ್ರ ನಂಬಿಕೊಂಡು ಮುಂದುವರಿಯುವುದು, ಇರುವುದನ್ನು ಇರುವ ಹಾಗೆಯೇ ನೋಡುವುದು ಬೌದ್ಧತತ್ವ. ಆತ್ಮ ಎಂಬುದಿಲ್ಲ. ಆತ್ಮವನ್ನು ಒಪ್ಪಿಕೊಂಡು ಬದುಕುವುದು ಸುಳ್ಳು ಹಾಗೂ ಭ್ರಮೆಯ ಬದುಕು’ ಎಂದರು.

‘ಬುದ್ಧಿಸಂ ಒಂದು ಧರ್ಮವಲ್ಲ; ಅದೊಂದು ಜೀವನ ಕ್ರಮ. ಹಲವು ದೇಶಗಳಲ್ಲಿ ಬುದ್ಧನ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಬುದ್ಧನ ಪಂಚಶೀಲ ತತ್ವಗಳನ್ನು ಪಾಲಿಸದೆ ದೇಶ ದುರ್ಗತಿಗೆ ಇಳಿದಿದ್ದು, ಜೈಲಿಗೆ ಹೋಗಿ ಬಂದವರನ್ನು ಸ್ವಾಗತಿಸಲು ಹೂವುಗಳು ಸಾಲುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಬೈಲುಕುಪ್ಪೆಯ ಭಂತೆ ಸೋನಮ್‌ ವಾಂಗ್‌ಡೆನ್‌ ಮಾತನಾಡಿ, ‘ಶಿಕ್ಷಣದ ಮೂಲಕ ಯುವ ಮನಸ್ಸುಗಳ ಜ್ಞಾನೋದಯ ಸಾಧ್ಯ. ಅಧ್ಯಯನದ ಜೊತೆ ಧ್ಯಾನವೂ ಇದ್ದಾಗ ಯಶಸ್ಸು ಸಿಗಲಿದೆ’ ಎಂದು ಸಲಹೆ ನೀಡಿದರು.

ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಸಂಸ್ಕೃತಿ ಹಾಗೂ ನಾಗರಿಕತೆ ಇರುತ್ತದೆ. ಅದನ್ನು ಚೆನ್ನಾಗಿ ಅರಿತುಕೊಳ್ಳಬೇಕು ಎಂದು ನುಡಿದರು.

ಕೆಎಸ್‌ಒಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರ ನಿರ್ದೇಶಕ ಪ್ರೊ.ಜಿ.ಸೋಮಶೇಖರ್‌, ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರು, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್‌.ನರೇಂದ್ರ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.