ಮೈಸೂರು: ‘ಬುದ್ಧ ಧರ್ಮವು ವಾಸ್ತವ ಹಾಗೂ ಸತ್ಯವನ್ನು ತಿಳಿಸುತ್ತದೆ’ ಎಂದು ಬೌದ್ಧ ಸಾಹಿತಿ ಕಲ್ಲಾರೆಪುರ ಮಹಾದೇವಯ್ಯ ಪ್ರತಿಪಾದಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಧಮ್ಮ ದೀಕ್ಷೆ ಪಡೆದ ಸವಿನೆನಪಿನಲ್ಲಿ ಇಲ್ಲಿನ ವಿಜಯನಗರ ಮೊದಲನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದ ಸಿದ್ಧಾರ್ಥ ಬುದ್ಧವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಫಲರಾಗಿದ್ದಾರೆ: ‘ಧರ್ಮವೆಂದರೆ ನಂಬಿಕೆ, ವಿಷಯದ ಮೇಲೆ ಜನರನ್ನು ಬಂಧಿಸುವುದು. ಆದರೆ, ಬುದ್ಧ ಧಮ್ಮವು ಅಸ್ತಿತ್ವದ ಅಂತಿಮ ಸತ್ಯ, ವಾಸ್ತವ ಸತ್ಯವನ್ನು ತಿಳಿಸುವುದಾಗಿದೆ. ಹಾಗಾಗಿ ವಾಸ್ತವ ಜಗತ್ತಿನತ್ತ ನಾವು ಸಾಗಬೇಕು. ವಿದೇಶಿಯರು ಬುದ್ಧರು ಬೋಧಿಸಿದ ಪಂಚಶೀಲಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಆದರೆ, ನಮ್ಮಲ್ಲೇ ಜನಿಸಿದ ಬುದ್ಧರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮುಖ ವಹಿಸಿದ್ದ ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಕ್ಖಿತ ಭಂತೇಜಿ, ‘ಯುದ್ಧದಿಂದ ಎರಡೂ ದೇಶಗಳ ಸಂಪತ್ತು, ಆಸ್ತಿ, ಜೀವ ಹಾನಿ ಸಂಭವಿಸುತ್ತದೆ. ಜಗತ್ತನ್ನು ನಾವು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ಬುದ್ಧರು ಬೋಧಿಸಿದ ಪ್ರೀತಿ, ಮೈತ್ರಿ, ಕರುಣೆಯಿಂದ ಗೆಲ್ಲಬಹುದು’ ಎಂದು ಹೇಳಿದರು.
ಪ್ರಶ್ನಿಸಬಾರದೇ?: ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ, ‘ಅತ್ಯಾಚಾರ, ಕೊಲೆ- ಸುಲಿಗೆ ನಡೆದಾಗ ಪ್ರಶ್ನಿಸಬಾರದೇ? ಮತೀಯವಾದ ಬಿತ್ತುವವರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರೆ ಬೆದರಿಕೆ ಕರೆಗಳು ಬರುತ್ತವೆ. ಹಾಗಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದನ್ನೂ ಪ್ರಶ್ನಿಸಬಾರದೇ? ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ತಪ್ಪೇ?’ ಎಂದು ಕೇಳಿದರು.
ಸಮಿತಿಯ ಅಧ್ಯಕ್ಷ ಪ್ರೊ. ಡಿ.ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಎಚ್. ಶಿವರಾಜ್, ಉಪಾಧ್ಯಕ್ಷ ಪಿ. ಮಹದೇವ್, ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ, ಎಂ. ಸಾವಕಯ್ಯ, ಆರ್. ನಟರಾಜ್, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ ಪಾಲ್ಗೊಂಡಿದ್ದರು.
ಸಿಜೆಐ ಅವರತ್ತ ಶೂ ಎಸೆದಿದ್ದನ್ನೂ ಸಮರ್ಥಿಸಿಕೊಳ್ಳುವವರು ಇದ್ದಾರೆಂದರೆ ಇದಕ್ಕಿಂತ ನೀಚ ವ್ಯವಸ್ಥೆ ಇದೆಯೇ?-ಆರ್. ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಬುದ್ಧ ಧಮ್ಮ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.