ADVERTISEMENT

ಧರ್ಮದ ಕಾಲಂನಲ್ಲಿ ‘ಬೌದ್ಧ’ ಬರೆಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:38 IST
Last Updated 20 ಸೆಪ್ಟೆಂಬರ್ 2025, 4:38 IST

ನಂಜನಗೂಡು: ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಜಾತಿ ಕಾಲಂನಲ್ಲಿ ಹೊಲಯ ಎಂದು ಬರೆಸುವಂತೆ ತಥಾಗತ ಬುದ್ಧ ವಿಹಾರದ ಅಧ್ಯಕ್ಷ ಚಿನ್ನಂಬಳ್ಳಿ ಸಿ.ಆರ್. ಮಹದೇವು ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ದಲಿತ ಸಂಘಟನೆಗಳ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದೇ‌ ತಿಂಗಳ 22 ರಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳಾದ ನಾವು ಅಂಬೇಡ್ಕರ್ ಅವರು ಹಿಂದೂ ಧರ್ಮ ತ್ಯಜಿಸಿ ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮ ಅಪ್ಪಿಕೊಂಡರು. ಹಾಗಾಗಿ ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗುತ್ತಾ ಅಂಬೇಡ್ಕರ್ ಆಶಯದಂತೆ ನಮ್ಮ ಧರ್ಮಕ್ಕೆ ಮರಳಿ ಹೋಗಬೇಕಿದೆ. ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಗೊಂದಲ ಉಂಟಾಗಿತ್ತು. ಜಾಗೃತಿ ಮೂಡಿಸುವಲ್ಲಿ ವಿಫಲರಾದೆವು. ಈಗಿನ ಸಮೀಕ್ಷೆಯಲ್ಲಿ ಧರ್ಮದ ಕಾಲಂ 6ರಲ್ಲಿ ಬೌದ್ಧ ಧರ್ಮ ಎಂದು ಜಾತಿಯ ಕಾಲಂನಲ್ಲಿ ಹೊಲಯ ಎಂದು ದಾಖಲಿಸಬೇಕು. ಇದೇ ತಿಂಗಳ 21ರಂದು ನಗರದ ಅಂಬೇಡ್ಕರ್ ಭವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ADVERTISEMENT

ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಈ ಹಿಂದೆ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ. ಅತಿ ಹೆಚ್ಚಾಗಿ ರಾಜ್ಯದಲ್ಲಿ ಬಲಗೈ ಸಮುದಾಯ ವಾಸಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾತಿ ಹೇಳಲು ಹಿಂಜರಿದ ಪರಿಣಾಮ ದಾಖಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಬಂದಿದೆ. ಈ ಸಮೀಕ್ಷೆಯಲ್ಲಿ ಹಾಗೆ ಆಗಬಾರದು. ಈ ಹಿಂದೆ ಹಿಂದೂ ಧರ್ಮ ಎಂದು ಬರೆಸಿದ್ದರು, ಹಿಂದೂ ಪದವನ್ನು ಬದಲಾಯಿಸಿ ಇನ್ನು ಮುಂದೆ ಸಮೀಕ್ಷೆಯಲ್ಲಿ ಜನರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು. ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಮೀಸಲಾತಿ ಮುಂದುವರೆಯುತ್ತದೆ ಎಂದು ಹೇಳಿದರು. 

ಸಿ.ಎಂ. ಅಂಕಯ್ಯ, ಜನಸಂಗ್ರಾಮ ಪರಿಷತ್ ರಾಜ್ಯ ಗೌರವಾಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್, ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ಸಂಚಾಲಕ ಶಂಕರಪುರ ಸುರೇಶ್, ಕಾರ್ಯ ಬಸವಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.