ADVERTISEMENT

ಹುಣಸೂರು | ಲಾರಿಗೆ ಬಸ್ ಡಿಕ್ಕಿ: ಚಾಲಕ, ಕ್ಲೀನರ್ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:06 IST
Last Updated 10 ಅಕ್ಟೋಬರ್ 2025, 4:06 IST
   

ಹುಣಸೂರು: ತಾಲ್ಲೂಕಿನ ಜಡಗನ ಕೊಪ್ಪಲು ಬಳಿ ಶುಕ್ರವಾರ ಮುಂಜಾನೆ ಲಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್ ಚಾಲಕ ಸಂಶದ್ ಹಾಗೂ ಕ್ಲೀನರ್ ದಿನೇಶ್ ಮೃತಪಟ್ಟವರು.

ಕೇರಳ‌ ಕೋಯಿಕ್ಕೋಡ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಮೈಸೂರಿನಿಂದ ಹುಣಸೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ADVERTISEMENT

ರಾತ್ರಿ‌ ಸುರಿದ ಗಾಳಿ, ಮಳೆಯಿಂದ ರಸ್ತೆ ಬದಿಯಲ್ಲಿದ್ದ ಒಣ ಮರ ರಸ್ತೆಗೆ ಉರುಳಿತ್ತು. ಬಸ್ ಚಾಲಕ ಅದನ್ನು ಗಮನಿಸಿ, ಮರವನ್ನು ತಪ್ಪಿಸಲು ಬಸ್ಅನ್ನು ಬಲಕ್ಕೆ ತಿರುಗಿಸಿದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.

'ಮಾಹಿತಿ ನೀಡಿದರೂ 108 ಆಂಬುಲೆನ್ಸ್ ಅಪಘಾತ ಸ್ಥಳಕ್ಕೆ ಸಕಾಲದಲ್ಲಿ ಬಾರದ ಕಾರಣ ಗಾಯಗೊಂಡವರನ್ನು ಪೊಲೀಸ್ ವಾಹನದಲ್ಲಿ ಮೈಸೂರು ಹಾಗೂ ಹುಣಸೂರು ಆಸ್ಪತ್ರೆಗೆ ಸಾಗಿಸಬೇಕಾಯಿತು' ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮುನಿಯಪ್ಪ ತಿಳಿಸಿದರು. ಘಟನಾ ಸ್ಥಳಕ್ಕೆ ಎಎಸ್ಪಿ ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.