ADVERTISEMENT

ಇಂದು ಬಂದ್‌ಗೆ ಕರೆ; ಕೆಲವರಿಂದ ನೈತಿಕ ಬೆಂಬಲ

ಪ್ರತಿಭಟನಕಾರರ ಜತೆ ಸಭೆ ನಡೆಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 2:59 IST
Last Updated 5 ಡಿಸೆಂಬರ್ 2020, 2:59 IST
ಡಾ.ಎ.ಎನ್.ಪ್ರಕಾಶ್‌ಗೌಡ ಅವರು ಸಂಘಟನೆಗಳ ಪ್ರಮುಖರ ಸಭೆ ನಡೆಸಿದರು
ಡಾ.ಎ.ಎನ್.ಪ್ರಕಾಶ್‌ಗೌಡ ಅವರು ಸಂಘಟನೆಗಳ ಪ್ರಮುಖರ ಸಭೆ ನಡೆಸಿದರು   

ಮೈಸೂರು: ಮರಾಠಾ ಅಭಿವೃದ್ಧಿ ನಿಗಮದ ಸ್ಥಾಪನೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಮೈಸೂರು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘವು ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಅತಿ ಅಗತ್ಯ ಸೇವೆಯ ಉದ್ಯಮ ಆಗಿರುವುದರಿಂದ ಎಂದಿನಂತೆ ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ತೆರೆದಿರುತ್ತವೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಮೈಸೂರು ರೀಜನ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಸ್.ಕೆ.ದಿನೇಶ್‌ ಪ್ರತಿಕ್ರಿಯಿಸಿ, ‘ಬಂದ್‌ಗೆ ಬೆಂಬಲ ನೀಡಿಲ್ಲ. ಎಂದಿನಂತೆ ಪೆಟ್ರೋಲ್ ಬಂಕ್‌ಗಳು ತೆರೆದಿರಲಿವೆ’ ಎಂದರು.

ADVERTISEMENT

ಮೈಸೂರು ಉದ್ಯಮ ಸಂಘಗಳ ಒಕ್ಕೂಟ, ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಜಿಲ್ಲಾ ಪ್ರವಾಸಿ ಬಸ್‌ ಮಾಲೀಕರ ಸಂಘ, ದೇವರಾಜ ಅರಸ್‌ ರಸ್ತೆ ಟ್ರೇಡ್‌ ಅಸೋಸಿಯೇಷನ್, ಕಲ್ಯಾಣ ಮಂಟಪ ಮಾಲೀಕರ ಸಂಘ ಒಳಗೊಂಡಂತೆ 15 ಸಂಘಗಳು ಬಂದ್‌ ಬೆಂಬಲಿಸದಿರಲು ಈಗಾಗಲೇ ನಿರ್ಧರಿಸಿವೆ.

ಆಟೊ ಚಾಲಕರ ಸಂಘಟನೆಗಳ ಪೈಕಿ ‘ನಮ್ಮ ಚಾಲಕರ ಟ್ರೇಡ್ ಯೂನಿ ಯನ್‌’ಗೆ ಸೇರಿದ ಚಾಲಕರು ಬಂದ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಸಂಘದ ವಿನು ಕುಮಾರ್ ತಿಳಿಸಿದ್ದಾರೆ.

ಪೊಲೀಸರಿಂದ ಸಭೆ‌: ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಅವರು, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಪ್ರಮುಖ ಸಭೆ ನಡೆಸಿ, ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.‌

ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಬಾರದು. ಬಸ್‌ಗಳತ್ತ ಕಲ್ಲು ತೂರಬಾರದು. ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟು ಮಾಡಬಾರದು ಎಂದು ಸೂಚಿಸಿದ್ದಾರೆ.

ಅಗ್ರಹಾರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲು ಮುಖಂಡರು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಆದರೆ, ಅನುಮತಿ ನೀಡಲು ನಿರಾಕರಿಸಲಾಗಿದೆ.

ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಚೌಕದಲ್ಲಿ ಪೊರಕೆ ಚಳವಳಿ, ಕರ್ನಾಟಕ ಜನಪರ ವೇದಿಕೆ ಯಿಂದ ಮಾನವ ಸರಪಳಿ ರಚನೆ, ಪ್ರತಿಭಟನೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.