ADVERTISEMENT

ಸಹಕಾರ ಕ್ಷೇತ್ರದಲ್ಲೂ ಜಾತಿ, ರಾಜಕೀಯ: ದೊಡ್ಡಸ್ವಾಮೇಗೌಡ

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ವಿಷಾದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:05 IST
Last Updated 22 ಜನವರಿ 2026, 4:05 IST
ಕೆ.ಆರ್.ನಗರ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಿ.ರವಿಶಂಕರ್ ಭಾಗವಹಿಸಿದ್ದರು
ಕೆ.ಆರ್.ನಗರ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಿ.ರವಿಶಂಕರ್ ಭಾಗವಹಿಸಿದ್ದರು   
ಸಹಕಾರ ಕ್ಷೇತ್ರ ಬಹಳ ವಿಶಾಲವಾಗಿದೆ | ಸಾಲ ಸುಸ್ತಿಯಾಗದಂತೆ ನೋಡಿಕೊಳ್ಳಬೇಕು | ಪ್ರತಿಯೊಬ್ಬರೂ ಖಾತೆ ತೆರೆದು ವ್ಯವಹಾರ ಮಾಡಬೇಕು

ಕೆ.ಆರ್.ನಗರ: ಸಹಕಾರ ಕ್ಷೇತ್ರದಲ್ಲಿ ಜಾತಿ ಮತ್ತು ರಾಜಕೀಯ ಆವರಿಸಿಕೊಂಡಿರುವುದು ದುರದೃಷ್ಟಕರ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.

ಇಲ್ಲಿನ ರೈತ ಸಮುದಾಯ ಭವನದಲ್ಲಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೆಲ್ಲುವವರೆಗೆ ರಾಜಕೀಯ ಮಾಡೋಣ, ಗೆದ್ದ ನಂತರ ರೈತರ ಅನುಕೂಲಕ್ಕಾಗಿ ಒಟ್ಟಿಗೆ ಕೆಲಸ ಮಾಡೋಣ, ನಮ್ಮೊಂದಿಗೆ ಕೈ ಜೋಡಿಸಿದರೆ ಇನ್ನೂ ಉತ್ತಮವಾಗಿ ಕೆಲಸ ಮಾಡಬಹುದು. ಮುಂದಿನ ದಿನಗಳಲ್ಲಾದರೂ ಕೆಲಸ ಮಾಡುವಾಗ ಯಾರೂ ರಾಜಕೀಯ ಮಾಡುವುದು ಬೇಡ ಎಂದರು.

ಸುಮಾರು 25 ವರ್ಷ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಬೇಕು ಎಂದು ನಾನು ಯಾವತ್ತೂ ಕನಸು ಕಂಡವನಲ್ಲ, ಅನಿರೀಕ್ಷತವಾಗಿ, ಹೈಕಮಾಂಡ್ ನಿರ್ದೇಶನದಂತೆ ಬರಬೇಕಾಯಿತು ಎಂದು ಹೇಳಿದರು.

ADVERTISEMENT

ಸಹಕಾರ ಕ್ಷೇತ್ರ ಬಹಳ ವಿಶಾಲವಾಗಿದೆ. ಕೆಸಿಸಿ ಸಾಲ ₹350 ಕೋಟಿ, ಕೃಷಿಕರಲ್ಲದವರಿಗೆ ₹ 650 ಕೋಟಿ, ಒಟ್ಟು ₹2,000 ಕೋಟಿ ಸಾಲ ನೀಡಿದೆ. ಮೈಸೂರು ಚಾಮರಾಜನಗರ ಎರಡು ಜಿಲ್ಲೆಗಳಿಂದ 317 ಸಹಕಾರ ಸಂಘಗಳಿವೆ, 31 ಬ್ಯಾಂಕ್‌ಗಳಿವೆ, ಬ್ಯಾಂಕ್ ಗಳ ಮೂಲಕ ಸಹಕಾರ ಸಂಘಗಳಿಗೆ ಸಾಲ ಕೊಡಲಾಗುತ್ತದೆ. ಮುಂದಿನ ತಿಂಗಳು ಸಭೆ ನಡೆಯಲಿದ್ದು, ಸಭೆಯಲ್ಲಿ ಹತ್ತಾರು ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ಹೊಸಬರಿಗೆ ಸಾಲ ನೀಡಲಾಗಿಲ್ಲ. ಹೊಸಬರಿಗೆ ಸಾಲ ಕೊಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸುಸ್ತಿದಾರರು ಮಾರ್ಚ್ 31ರೊಳಗೆ ಸಾಲ ಮರುಪಾವತಿಸಿದರೆ ಅವರಿಗೂ ಕೂಡ ಹೊಸದಾಗಿ ಸಾಲ ಕೊಡಲು ಚಿಂತಿಸಲಾಗುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಸಾಕಷ್ಟು ಭದ್ರತೆ ಹೊಂದಿದ್ದು, ಪ್ರತಿಯೊಬ್ಬರು ಖಾತೆ ತೆರೆದು ವ್ಯವಹಾರ ಮಾಡಬೇಕು. ಠೇವಣಿ ಇಟ್ಟು ಬ್ಯಾಂಕ್ ಅಭಿವೃದ್ಧಿಗೊಳಿಸಬೇಕು. ಬ್ಯಾಂಕ್ ವ್ಯವಸ್ಥಾಪಕರು ಸಾಲ ಸುಸ್ತಿಯಾಗದಂತೆ ನಡೆಸಿಕೊಂಡು ಹೋಗಬೇಕು, ಸುಸ್ತಿ ಸಾಲ ವಸೂಲಿ ಮಾಡುವ ಕೆಲಸ ಆದಷ್ಟು ಬೇಗ ಮಾಡಬೇಕು ಎಂದರು.

ಶಾಸಕ ಡಿ.ರವಿಶಂಕರ್, ಮುಖಂಡ ಎಚ್.ಎನ್.ವಿಜಯ್, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯರಾಮ್, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಹಾ ಮಂಡಳ ಅಧ್ಯಕ್ಷ ಎಂ.ರಮೇಶ್, ರಾಜ್ಯ ಕುಕ್ಕೂಟ ಅಭಿವೃದ್ಧಿ ಮಹಾ ಮಂಡಳಿ ನಿರ್ದೇಶಕ ಎಸ್.ಸಿದ್ದೇಗೌಡ, ಮೈಮುಲ್ ನಿರ್ದೇಶಕಿ ಮಲ್ಲಿಕಾ ರವಿ, ಎನ್.ದಿನೇಶ್, ಮುಖಂಡ ಹಾಡ್ಯ ಮಹದೇವಸ್ವಾಮಿ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಹಂಪಾಪುರ ವಿಎಸ್ಎಸ್ಎನ್ ಅಧ್ಯಕ್ಷ ಪ್ರಶಾಂತ್ ಜೈನ್, ಕುರುಬರ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸಯ್ಯದ್ ಜಾಬೀರ್, ಮುಖಂಡರಾದ ಮಾರ್ಚಹಳ್ಳಿ ಶಿವರಾಮ್, ಕೋಳಿ ಪ್ರಕಾಶ್, ಎಂ.ನಟರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.