ADVERTISEMENT

ಸರ್ಕಾರಿ ನೌಕರರು ಜಾತಿ, ಧರ್ಮ ಎನ್ನುವುದು ವೃತ್ತಿಗೆ ಮಾಡುವ ಅವಮಾನ: ಸಿಎಂ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:48 IST
Last Updated 20 ಜುಲೈ 2025, 2:48 IST
ಮೈಸೂರಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ಮೈಸೂರಿನ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ಮೈಸೂರು: ‘ಸರ್ಕಾರಿ ನೌಕರರು ಜಾತಿ, ಧರ್ಮ ಎನ್ನುವುದು ವೃತ್ತಿಗೆ ಮಾಡುವ ಅವಮಾನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಸರ್ಕಾರಿ ನೌಕರರ ಎಸ್ಎಸ್ಎಲ್‌ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

‘ಅಧಿಕಾರದಲ್ಲಿರುವ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ. ಅಪ್ಪ ಅಮ್ಮ ಖರ್ಚು ಮಾಡಿದ ಹಣದಲ್ಲಿ ನಾವು ಸರ್ಕಾರಿ ನೌಕರರು, ಶಾಸಕರು, ಮಂತ್ರಿಗಳಾಗಲು ಸಾಧ್ಯವಿಲ್ಲ. ಸಮಾಜದ ಎಲ್ಲಾ ಜಾತಿ, ಧರ್ಮದವರ ಋಣ ನಮ್ಮ ಮೇಲಿದೆ. ಈ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದರು.

ADVERTISEMENT

‘ನಮಗೆ ವಿಶ್ವ ಮಾನವರಾಗುವ ಅವಕಾಶ ಇದೆ. ಹುಟ್ಟು ಆಕಸ್ಮಿಕ, ಸಾವು ಗ್ಯಾರಂಟಿ, ಈ ನಡುವಿನ ಬದುಕನ್ನು ಸಾರ್ಥಕವಾಗಿ ಕಳೆಯಬೇಕು. ಮೌಢ್ಯ ತೊಡೆದು ಮೌಲ್ಯಯುತ, ವೈಚಾರಿಕ ಜೀವನ ನಡೆಸಬೇಕು‌’ ಎಂದು ಸಲಹೆ ನೀಡಿದರು.

‘ಪ್ರತಿಭೆ ಯಾರ ಸೊತ್ತು ಅಲ್ಲ, ಸೂಕ್ತ ಅವಕಾಶ ದೊರೆತರೆ ಅದು ಎಲ್ಲರನ್ನೂ ಆಶ್ರಯಿಸುತ್ತದೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಅಪಾರ. ಶಿಕ್ಷಕರು, ಸೈನಿಕರು, ರೈತರು ನಮ್ಮ ಬದುಕನ್ನು ಹಸನು ಮಾಡಿದ್ದಾರೆ. ಅವರ ಋಣ ತೀರಿಸುವುದೂ ನಮ್ಮ ಕರ್ತವ್ಯ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕಿರುವುದು ನಮ್ಮ ಜವಾಬ್ದಾರಿ. ಶಾಸಕಾಂಗ ಜಾರಿಗೆ ತರುವುದನ್ನು ಕಾರ್ಯಾಂಗ ಪರಿಣಾಮಕಾರಿ ಅನುಷ್ಠಾನ ಮಾಡಬೇಕು. ಆಗ ಮಾತ್ರ ನಾವು ಪರಸ್ಪರ ಸಹಕಾರದಿಂದ ಇರಲು ಸಾಧ್ಯ’ ಎಂದರು.

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ಗ್ರಾಮೀಣ ಪ್ರತಿಭೆಗಳು ಇರುವ ಸೌಲಭ್ಯದಲ್ಲೇ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳು ಇದಕ್ಕೆ ಪುಷ್ಟಿ ನೀಡಿವೆ’ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 650 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೆಎಸ್ಒಯು ಕುಲಪತಿ ಶರಣಪ್ಪ ವಿ.ಹಲಸೆ, ಶಾಸಕ ಡಿ.ರವಿಶಂಕರ್, ಯುಪಿಎಸ್‌ಸಿ ಪರೀಕ್ಷೆ ಸಾಧಕಿ ಎ.ಸಿ.ಪ್ರೀತಿ, ನಾಲ್ಕು ಜಿಲ್ಲೆಗಳ ಸಂಘದ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

‘ಖಾಲಿ ಹುದ್ದೆ ಭರ್ತಿ ಮಾಡಿ’

‘ರಾಜ್ಯದಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು ನೌಕರರು ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ನೌಕರರ ಮೇಲಿನ ಹೊರೆ ಕಡಿಮೆಯಾಗುತ್ತದೆ’ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕೋರಿದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನೌಕರ ಸ್ನೇಹಿಯಾಗಿದೆ. 6ನೇ ಮತ್ತು 7ನೇ ವೇತನ ಆಯೋಗದ ಶಿಫಾರಸನ್ನು ಜಾರಿ ಮಾಡಿ ಸಹಕರಿಸಿದ್ದಾರೆ. ಒಪಿಎಸ್‌ ಮತ್ತು ಆರೋಗ್ಯ ಸಂಜೀವಿನಿ ನೀಡಲು ಕ್ರಮ ವಹಿಸಬೇಕು. ಸುಮಾರು 1.5 ಲಕ್ಷದಷ್ಟು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಇದ್ದು ‘ಸಿ ಅಂಡ್‌ ಆರ್‌’ ನಿಯಮಗಳ ಬದಲಾವಣೆ ಸಮಸ್ಯೆಯನ್ನು ಸೃಷ್ಟಿಸಿದ್ದು. ಈ ಬಗ್ಗೆ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.