ಮೈಸೂರು: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಆಧರಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅರೆಬರೆಯಾಗಿ ನಡೆದಿರುವುದು ಕಂಡುಬಂದಿದ್ದು, ಅದನ್ನು ಪೂರ್ಣಗೊಳಿಸಲು ಈಗ ನ್ಯಾಯಬೆಲೆ ಅಂಗಡಿಗಳ ಸಹಕಾರ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಈವರೆಗೆ ಸಮೀಕ್ಷೆ ನಡೆಯದ, ಪಟ್ಟಿಯಲ್ಲಿರುವ ಕುಟುಂಬಗಳ ಪಡಿತರ ಕಾರ್ಡ್‌ಗಳನ್ನು ಆಧರಿಸಿಯೇ ಸಮೀಕ್ಷೆ ನಡೆಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.
ತಹಶೀಲ್ದಾರರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗಣತಿದಾರರು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಸಿಬ್ಬಂದಿಯೂ ಕಡ್ಡಾಯವಾಗಿ ಸಹಕಾರ ನೀಡಬೇಕಾಗಿದೆ.
ಅರೆಬರೆ: ಮೈಸೂರು ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್‌ನಲ್ಲಿ ಹೆಸರಿರುವ ಎಲ್ಲ ಸದಸ್ಯರ ಸಮೀಕ್ಷೆ ಆಗಿಲ್ಲ ಎಂಬುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
‘ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ, ಅವರಲ್ಲಿ ಕೆಲವರ ಸಮೀಕ್ಷೆಯನ್ನಷ್ಟೇ ಮಾಡಿರುವ ನಿದರ್ಶನಗಳು ಹೆಚ್ಚಿವೆ. ಕೆ.ಆರ್.ನಗರ ತಾಲ್ಲೂಕಿನಲ್ಲಿ 36,542 ಮತ್ತು ಸಾಲಿಗ್ರಾಮ ತಾಲ್ಲೂಕಿನಲ್ಲಿ 32,575 ಕುಟುಂಬಗಳ ಸಮೀಕ್ಷೆ ಅಪೂರ್ಣವಾಗಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.
‘ಬಿಪಿಎಲ್ ಅಥವಾ ಎಪಿಎಲ್ ಪಟ್ಟಿಯಲ್ಲಿರುವವರ ಸಮೀಕ್ಷೆಯನ್ನು ನೋ ಯುಎಚ್ಐಡಿ ಬಳಸಿ, ಆರ್ ಆರ್ ಸಂಖ್ಯೆ ನಮೂದಿಸಿ ಹೊಸದಾಗಿ ಯುಎಚ್ಐಡಿ ಸೃಷ್ಟಿಸಿ ನಡೆಸಬೇಕು. ಆರ್.ಆರ್ ಹಾಗೂ ಸಮೀಕ್ಷೆ ಐಡಿ ಸಂಖ್ಯೆಯನ್ನು ಮೇಲ್ವಿಚಾರಕರಿಗೆ ನೀಡಬೇಕು. ಅವರು ಹೊಸದಾಗಿ ಮ್ಯಾಪಿಂಗ್ ಮಾಡಬೇಕು’ ಎಂದೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಸಮೀಕ್ಷೆಯು ಈಗ ಗಣತಿದಾರರು ಮತ್ತು ಮೇಲ್ವಿಚಾರಕರ ಜಂಟಿ ಪ್ರಯತ್ನದಲ್ಲೇ ನಡೆಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.