ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಮೈಸೂರು: ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಶೇ 85ರಷ್ಟು ಪ್ರಗತಿ ಸಾಧಿಸಿದ್ದು, ಈ ತಿಂಗಳಾಂತ್ಯಕ್ಕೆ ಗುರಿ ತಲುಪುವ ಪ್ರಯತ್ನ ನಡೆದಿದೆ.
ಸೆ. 22ರಿಂದ ರಾಜ್ಯದಲ್ಲಿ ಏಕಕಾಲಕ್ಕೆ ಸಮೀಕ್ಷೆ ಆರಂಭಗೊಂಡಿದ್ದು, ಗಣತಿಯ ಅವಧಿಯನ್ನು ಸರ್ಕಾರವು ಈ ತಿಂಗಳಾಂತ್ಯದವರೆಗೆ ವಿಸ್ತರಿಸಿದೆ. ಜಿಲ್ಲೆಯಲ್ಲಿ 7,686 ಮಂದಿ ಗಣತಿದಾರರು ಈ ಕಾರ್ಯದಲ್ಲಿ ಭಾಗಿ ಆಗಿದ್ದು, ಇವರೊಟ್ಟಿಗೆ 149 ಮಾಸ್ಟರ್ ಟ್ರೈನರ್‌ಗಳು, 389 ಮೇಲ್ವಿಚಾರಕರೂ ಸಹ ಪಾಲ್ಗೊಂಡಿದ್ದಾರೆ.
ಎಲ್ಲಿ ಮುಂದು?: ಹುಣಸೂರು ತಾಲ್ಲೂಕು ಸಮೀಕ್ಷೆಯಲ್ಲಿ ಶೇ 93ರಷ್ಟು ಪ್ರಗತಿ ಸಾಧಿಸುವ ಮೂಲಕ ತಾಲ್ಲೂಕುವಾರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ 3.38 ಲಕ್ಷ ಜನರ ಪೈಕಿ 3.16 ಲಕ್ಷ ಮಂದಿ ಸಮೀಕ್ಷೆಯಲ್ಲಿ ಭಾಗಿ ಆಗಿದ್ದಾರೆ. ನಂತರದಲ್ಲಿ ಕೆ.ಆರ್. ನಗರ ತಾಲ್ಲೂಕು ಇದ್ದು, ಇಲ್ಲಿ ಶೇ 87ರಷ್ಟು ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಶೇ 80ಕ್ಕಿಂತ ಅಧಿಕ ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ.
ಮೈಸೂರು ತಾಲ್ಲೂಕಿನಲ್ಲಿ 5.06 ಲಕ್ಷ ಕುಟುಂಬ: ಮೈಸೂರು ನಗರವನ್ನೂ ಒಳಗೊಂಡಂತೆ ತಾಲ್ಲೂಕಿನಲ್ಲಿ ಬರೋಬ್ಬರಿ 5.06 ಲಕ್ಷ ಕುಟುಂಬಗಳ ಸಮೀಕ್ಷೆಯ ಗುರಿ ಹೊಂದಲಾಗಿದ್ದು, ಒಟ್ಟು 15.32 ಲಕ್ಷ ಜನಸಂಖ್ಯೆ ಅಂದಾಜಿಸಲಾಗಿದೆ. ಇವರಲ್ಲಿ 12.89 ಲಕ್ಷ ಮಂದಿ ಸಮೀಕ್ಷೆಯಲ್ಲಿ ಭಾಗಿ ಆಗಿದ್ದಾರೆ.
ಗ್ರಾಮೀಣಕ್ಕಿಂತ ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ಕೈಗೊಳ್ಳುವುದು ಗಣತಿದಾರರಿಗೆ ಸವಾಲಿನ ಕೆಲಸವಾಗಿದೆ. ಅದರಲ್ಲಿಯೂ ಶಿಕ್ಷಿತರು ಹೆಚ್ಚಿರುವ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿಯೇ ಅಡ್ಡಿ ಆಗಿರುವುದಾಗಿ ಕೆಲವು ಗಣತಿದಾರರು ಹೇಳುತ್ತಾರೆ.
‘ನಗರ ಪ್ರದೇಶದಲ್ಲಿ ಆರಂಭದ ದಿನಗಳಲ್ಲಿ ಒಂದಿಷ್ಟು ಸಮಸ್ಯೆ ಆಗಿದ್ದು ನಿಜ. ಆದರೆ ಈಗ ವೇಗ ಪಡೆದುಕೊಳ್ಳುತ್ತಿದೆ. ಸಮೀಕ್ಷೆಗೆ ಜನ ಒಲವು ತೋರುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದೀಪಾವಳಿಯಲ್ಲೂ ಕಾರ್ಯ: ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ಸರ್ಕಾರ ದೀಪಾವಳಿ ಪ್ರಯುಕ್ತ 3 ದಿನಗಳ ರಜೆ ನೀಡಿದೆ. ಆದರೆ ಉಳಿದ ಇಲಾಖೆಗಳ ಸಿಬ್ಬಂದಿ ಮಾತ್ರ ರಜೆಯಲ್ಲಿಯೂ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಮಂಗಳವಾರವೂ ಸುಮಾರು 3 ಸಾವಿರ ಮಂದಿಯ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಬುಧವಾರ ದೀಪಾವಳಿ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಗುರುವಾರದಿಂದ ಈ ಕಾರ್ಯ ಇನ್ನಷ್ಟು ವೇಗ ಪಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.