ADVERTISEMENT

ಆಯಿಷ್‌ನಲ್ಲೀಗ ಶಸ್ತ್ರಚಿಕಿತ್ಸಾ ಸೇವೆ: ‘ಶ್ರೇಷ್ಠತೆಯ ಕೇಂದ್ರ’ 20ರಂದು ಉದ್ಘಾಟನೆ

ಒಂದೇ ಸೂರಿನಲ್ಲಿ ಹಲವು ಸೌಲಭ್ಯದ ‘ಶ್ರೇಷ್ಠತೆಯ ಕೇಂದ್ರ’ ಸಿದ್ಧ

ಎಂ.ಮಹೇಶ
Published 18 ಜೂನ್ 2022, 19:30 IST
Last Updated 18 ಜೂನ್ 2022, 19:30 IST
ಮೈಸೂರಿನ ಆಯಿಷ್‌ನಲ್ಲಿ ನಿರ್ಮಿಸಿರುವ ‘ಶ್ರೇಷ್ಠತೆಯ ಕೇಂದ್ರ’ ಉದ್ಘಾಟನೆಗೆ ಸಜ್ಜಾಗಿದೆ/ ಪ್ರಜಾವಾಣಿ ಚಿತ್ರ
ಮೈಸೂರಿನ ಆಯಿಷ್‌ನಲ್ಲಿ ನಿರ್ಮಿಸಿರುವ ‘ಶ್ರೇಷ್ಠತೆಯ ಕೇಂದ್ರ’ ಉದ್ಘಾಟನೆಗೆ ಸಜ್ಜಾಗಿದೆ/ ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಅಖಿಲ ಭಾರತ ವಾಕ್‌–ಶ್ರವಣ ಸಂಸ್ಥೆ (ಆಯಿಷ್‌) ಆವರಣದಲ್ಲಿ ₹ 150.49 ಕೋಟಿ ವೆಚ್ಚದಲ್ಲಿ ‘ಶ್ರೇಷ್ಠತೆಯ ಕೇಂದ್ರ’ ಸ್ಥಾಪಿಸಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ಸೇವೆ ದೊರೆಯಲಿದೆ. ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 20ರಂದು ಉದ್ಘಾಟಿಸಲಿದ್ದಾರೆ.‌

ವಾಕ್‌ ಮತ್ತು ಶ್ರವಣ ದೋಷದ ಚಿಕಿತ್ಸೆಗಾಗಿ ಸಂಸ್ಥೆಗೆ ಮೈಸೂರು ಭಾಗದವರ ಜೊತೆಗೆ ರಾಜ್ಯ ಹಾಗೂ ಹೊರ ರಾಜ್ಯದವರೂ ಬರುತ್ತಾರೆ. ಈವರೆಗೆ ಇಲ್ಲಿ ಶಸ್ತ್ರಚಿಕಿತ್ಸೆ ಸೇವೆ ಇರಲಿಲ್ಲ. ಕೆ.ಆರ್‌. ಆಸ್ಪತ್ರೆ ಮೊದಲಾದವುಗಳನ್ನು ಅವಲಂಬಿಸುವ ಅಥವಾ ಅಲೆಯುವ ಸ್ಥಿತಿ ಇತ್ತು. ಈಗ ಇನ್ನೊಂದೂವರೆ ತಿಂಗಳಲ್ಲಿ ಆಯಿಷ್‌ನಲ್ಲೇ ಆ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಇಎನ್‌ಟಿ (ಕಿವಿ, ಮೂಗು ಹಾಗೂ ಗಂಟಲು) ತಜ್ಞರನ್ನು ಸಜ್ಜುಗೊಳಿಸಲಾಗುತ್ತಿದೆ.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುದಾನದಿಂದ ನಿರ್ಮಿಸಿರುವ ಕೇಂದ್ರದಲ್ಲಿ 2 ಆಪರೇಷನ್‌ ಥಿಯೇಟರ್‌ಗಳನ್ನು ಸಜ್ಜುಗೊಳಿಸಿ, ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಕಾಕ್ಲಿಯರ್‌ ಇಂಪ್ಲಾಂಟ್ಸ್, ಮಧ್ಯಮ ಕಿವಿಯ ಇಂಪ್ಲಾಂಟ್ಸ್‌ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದು.

ADVERTISEMENT

ಕೇಂದ್ರದ ವಿಶೇಷವೇನು?:

4 ಮಹಡಿಗಳ ಈ ಕಟ್ಟಡದಲ್ಲಿ 5 ಸಂಶೋಧನಾ ಕೇಂದ್ರಗಳಿರಲಿವೆ. ಮಾತು–ಭಾಷಾ ವಿಜ್ಞಾನ, ಶ್ರವಣ ವಿಜ್ಞಾನ, ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ಹಾಗೂ ಸಾಂಕ್ರಾಮಿಕತೆಯ ಸಂಶೋಧನೆ ಮತ್ತು ಸಂವಹನ ನ್ಯೂನತೆಗಳ ಅರಿವಿನ ವರ್ತನೆಯ ವಿಜ್ಞಾನ ಕೇಂದ್ರ, ಪುನರ್ವಸತಿ ಎಂಜಿನಿಯರಿಂಗ್, ಅಕೌಸ್ಟಿಕ್ಸ್‌ ಮತ್ತು ಬಯೊಮೆಡಿಕಲ್‌ ಎಂಜಿನಿಯರಿಂಗ್ ಮತ್ತು ಸಂವರ್ಧನ ಹಾಗೂ ಪರ್ಯಾಯ ಸಂವಹನ ಮತ್ತು ಸಂಜ್ಞಾ ಭಾಷಾ ಕೇಂದ್ರ ನಿರ್ಮಿಸಲಾಗಿದೆ.

ಐದು ಚಿಕಿತ್ಸಾ ಕೇಂದ್ರಗಳನ್ನು ಹೊಂದಿದೆ. ಮಾತು ಹಾಗೂ ಭಾಷಾ ನ್ಯೂನತೆವುಳ್ಳ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೇಂದ್ರವಿದೆ. ಕಿವಿ ಮೊರೆತ ಮತ್ತು ತಲೆಸುತ್ತುವಿಕೆ ನ್ಯೂನತೆಯುಳ್ಳ ವ್ಯಕ್ತಿಗಳಿಗೆ, ಶ್ರವಣದೋಷವುಳ್ಳ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗೆ, ನುಂಗುವ ಕ್ರಿಯೆಯಲ್ಲಿ ನ್ಯೂನತೆ ಉಳ್ಳವರಿಗೆ, ಸಂವಹನ ನ್ಯೂನತೆಗಳ ಶಸ್ತ್ರಚಿಕಿತ್ಸೆ ಹಾಗೂ ಪುನರ್ವಸತಿ ಕೇಂದ್ರಗಳಿವೆ. ಪ್ರಕಟಣೆ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ಘಟಕ, ಸಂವಹನ ನ್ಯೂನತೆಗಳ ಸಾರ್ವಜನಿಕ ಶಿಕ್ಷಣ ಕೇಂದ್ರವೂ ಕಾರ್ಯನಿರ್ವಹಿಸಲಿದೆ. 2014ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಮಾನವ ಸಂಪನ್ಮೂಲ ಅಭಿವೃದ್ಧಿಗೆ

ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ತಪಾಸಣೆ ಮತ್ತು ಪುನರ್ವಸತಿಗೆ ಅಗತ್ಯವಿರುವ ವೃತ್ತಿಪರರು ಹಾಗೂ ಅದರ ಲಭ್ಯತೆಯ ನಡುವಿನ ಅಂತರ ಕಡಿಮೆ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಸಂವಹನ ನ್ಯೂನತೆಯುಳ್ಳ ಭಾರತೀಯರಿಗೆ ಅನುಗುಣವಾಗಿ ದತ್ತಾಂಶ ಸಂಗ್ರಹ, ಪರೀಕ್ಷೆಗಳು ಮತ್ತು ಮಾದರಿಗಳಿಗಾಗಿ ಸಂಶೋಧನೆ ಕೈಗೊಳ್ಳಲಾಗುವುದು.

‘ಸಂವಹನ ನ್ಯೂನತೆ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಶ್ರೇಷ್ಠತೆ ಗಳಿಸುವ ಕೇಂದ್ರವಾಗಿಸುವ ಗುರಿ ಇದೆ. ವಿವಿಧ ಕ್ಷೇತ್ರಗಳ ಶಿಕ್ಷಣ ತಜ್ಞರು, ಚಿಕಿತ್ಸಕರು, ತಂತ್ರಜ್ಞರು ಮತ್ತು ಸಂಶೋಧಕರನ್ನು ಒಳಗೊಂಡಿದೆ. ಸಂವಹನ ನ್ಯೂನತೆಗಳ ಸಮಗ್ರ ಸಂಶೋಧನೆ, ಅತ್ಯಾಧುನಿಕ ಸೌಲಭ್ಯ ಬಳಸಿ ಶಸ್ತ್ರಚಿಕಿತ್ಸೆ ಸೇವೆ ಜೊತೆಗೆ ಪುನರ್ವಸತಿ ಸೇವೆಗಳನ್ನು ನೀಡಲಾಗುವುದು’ ಎಂದು ಕೇಂದ್ರದ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಸೇವೆ

ಕೇಂದ್ರದಲ್ಲಿ ವರ್ಷಕ್ಕೆ 12ಸಾವಿರದಿಂದ 15ಸಾವಿರ ಮಂದಿ ನ್ಯೂನತೆಯುಳ್ಳವರಿಗೆ ಸೇವೆ ಸಿಗಲಿದೆ. ಮಾಸಿಕ 50ರಿಂದ 60 ಶಸ್ತ್ರಚಿಕಿತ್ಸೆಗಳು ನಡೆಯಲಿವೆ. 16 ಮಂದಿ ಬೋಧಕರನ್ನು ನೇಮಿಸಿಕೊಳ್ಳಲಾಗಿದೆ.

–ಡಾ.ಎಂ. ಪುಷ್ಪಾವತಿ, ನಿರ್ದೇಶಕಿ, ಆಯಿಷ್

***

ಮೈಸೂರಿನ ಗರಿಮೆ

ಶ್ರೇಷ್ಠತೆಯ ಕೇಂದ್ರವನ್ನು ₹ 150.49 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ವಾಕ್–ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದ ಸಂಶೋಧನೆ, ಶಸ್ತಚಿಕಿತ್ಸೆ ಮೊದಲಾದವು ಒಂದೇ ಸೂರಿನಲ್ಲಿ ಸಿಗುವ ಸಂಸ್ಥೆಯು ಮೈಸೂರಿನ ಗರಿಮೆ.

–ಪ್ರತಾಪ ಸಿಂಹ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.