ಹುಣಸೂರು: ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಬಿ ಬದುಕು ನಡೆಸಲು ಕೇಂದ್ರ ಸರ್ಕಾರ ಆರಂಭಿಸಿರುವ ‘ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ’ ಪೂರಕವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪೆನಿಯ ಕಂಪನಿ ಷೇರುದಾರರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
‘ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಹಿಳೆಯರನ್ನು ಗುಂಪುಗಳನ್ನಾಗಿಸಿ, ವೈಜ್ಞಾನಿಕ ಕೃಷಿ ಅಭಿವೃದ್ಧಿಯೊಂದಿಗೆ, ಬೇಸಾಯಕ್ಕೆ ಬೇಕಾಗುವ ಆರ್ಥಿಕ ನೆರವು, ಬೀಜ, ಗೊಬ್ಬರ ಎಲ್ಲವನ್ನೂ ಮಹಿಳೆಯರು ಮುನ್ನಡೆಸುವ ಕಂಪೆನಿ ಮೂಲಕ ನೀಡಿ ಸ್ವಾವಲಂಬಿ ವೃತ್ತಿ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದರು. ‘ರಾಜ್ಯದಲ್ಲಿ 60 ತಾಲ್ಲೂಕುಗಳು ಆಯ್ಕೆಗೊಂಡಿದ್ದು, ಹುಣಸೂರು ಸೇರಿದೆ. ಪ್ರಥಮ ಹಂತದಲ್ಲಿ 26 ಗ್ರಾಮಗಳ 1 ಸಾವಿರ ಷೇರುದಾರರನ್ನು ಹೊಂದಿದೆ’ ಎಂದರು.
ಸಂಜೀವಿನಿ ಯೋಜನೆ ಸಂಘಟನೆ ವ್ಯವಸ್ಥಾಪಕಿ ಮಂಜುಳಾ ಮಾತನಾಡಿ, ‘ತಾಲ್ಲೂಕಿನಲ್ಲಿ ರೈತ ಮಹಿಳಾ ಗುಂಪುಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಹಂತದಲ್ಲಿ 105 ಗುಂಪುಗಳನ್ನು ನಿರ್ಮಿಸಲಾಗಿದೆ. ಪ್ರತಿ ಗುಂಪಿನಲ್ಲಿ 20 ಸದಸ್ಯರಿದ್ದು, ಪ್ರಥಮ ಹಂತದಲ್ಲಿ ತಾಲ್ಲೂಕಿನ 26 ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆ ನಡೆದಿದೆ’ ಎಂದರು. ‘ಸಂಘದ ಸದಸ್ಯರಿಂದ ತಲಾ ₹ 1 ಸಾವಿರ ಸಂಗ್ರಹಿಸಿ ₹ 15 ಲಕ್ಷ ಷೇರು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕಂಪೆನಿ ಹೆಸರಿನ ಖಾತೆಯಲ್ಲಿ ಠೇವಣಿ ಇಡಲಾಗಿದೆ’ ಎಂದರು.
ರೈತ ಮಹಿಳೆ ಬೆಳೆಯುವ ಪದಾರ್ಥ ಮಾರುಕಟ್ಟೆಯಲ್ಲಿ ಸೂಕ್ತ ದರಕ್ಕೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದು, ಕೃಷಿಗೆ ಬೇಕಾಗುವ ಪೂರಕ ವ್ಯವಸ್ಥೆ, ಯಂತ್ರೋಪಕರಣ ಖರೀದಿ, ಬೀಜ ಗೊಬ್ಬರಗಳಿಗೆ ಆರ್ಥಿಕ ಬಂಡವಾಳ ನೀಡುವುದು ಕಲ್ಪವೃಕ್ಷ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪೆನಿಯ ಮೂಲ ಉದ್ದೇಶ’ ಎಂದರು.
ಸಭೆಯಲ್ಲಿ ಕಲ್ಪವೃಕ್ಷ ಸಂಜೀವನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪೆನಿ ಅಧ್ಯಕ್ಷೆ ಸವಿತಾ ಎಚ್.ಕೆ. ನಿರ್ದೇಶಕರಾದ ಗೀತಾ ವಸಂತಮ್ಮ, ರೂಪಾ, ಶಿವಮ್ಮ, ಸಾಕಮ್ಮ, ಶಾಭಾಷ್, ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
‘ಮೌಲ್ಯವರ್ಧನೆ ದರ ನಿಗದಿ’
‘ಕೇಂದ್ರ ಸರ್ಕಾರದ ₹ 39.40 ಲಕ್ಷ ಆರ್ಥಿಕ ಸಹಕಾರವನ್ನು ಮೂಲ ಪ್ರಾರಂಭಿಕ ಬಂಡವಾಳವಾಗಿ ಮೂರು ವರ್ಷ ಈ ಯೋಜನೆ ಬಳಸಿಕೊಳ್ಳಲಿದೆ. ರೈತ ಬೆಳೆಯುವ ಪದಾರ್ಥಗಳ ಮೌಲ್ಯವರ್ಧನೆ ಮತ್ತು ದರ ನಿಗದಿಗೊಳಿಸಿ ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟ ಮಾಡುವ ಚಟುವಟಿಕೆ ಇದಾಗಿದೆ.‘ಸಂಘದ ಷೇರುದಾರರಿಗೆ ತರಬೇತಿಗೆ ₹ 5 ಲಕ್ಷ ಯಂತ್ರೋಪಕರಣ ಬಾಡಿಗೆ ಕೇಂದ್ರ ನಿರ್ವಹಣೆಗೆ ₹ 10 ಲಕ್ಷ ಕಾರ್ಯವಾಹಿ ಬಂಡವಾಳಕ್ಕೆ ₹ 24.44 ಲಕ್ಷ ಕೇಂದ್ರ ಸರ್ಕಾರ ವಿವಿಧ ಹಂತದಲ್ಲಿ ನೀಡಲಿದೆ’ ಎಂದರು. ಎಂದು ಸಂಜೀವಿನಿ ಮಹಿಳಾ ಒಕ್ಕೂಟದ ತಾಲ್ಲೂಕು ವ್ಯವಸ್ಥಾಪಕಿ ಮಂಜುಳಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.