ಮೈಸೂರು: ‘ರಾಜ್ಯದಲ್ಲಿ ಎಲ್ಲೇ ವಿದ್ಯುತ್ ದೀಪಾಲಂಕಾರ ಮಾಡಬೇಕೆಂದರೂ ಸೆಸ್ಕ್‌ನವರನ್ನೇ ಕರೆಯಬೇಕು ಎನ್ನುವಂತಾಗಿದೆ. ಈ ಯಶಸ್ಸು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ’ ಎಂದು ಶಾಸಕ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಇಲ್ಲಿನ ವಿಜಯನಗರದ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಹೊಸ ವರ್ಷದ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ನಾವು ಮಾಡುವ ಕೆಲಸಗಳಿಂದ ಜನ ನಮ್ಮನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ಪರಿಶ್ರಮ ಹಾಕೋಣ; ಶಾಶ್ವತವಾಗಿ ಉಳಿಯುವಂಥ ಕೆಲಸಗಳನ್ನು ಮಾಡೋಣ. ನಮ್ಮ ಕೆಲಸಗಳಿಂದ ಜನ ನಮ್ಮನ್ನು ಸ್ಮರಿಸುತ್ತಾರೆ. ಶ್ರಮಕ್ಕೆ ತಕ್ಕ ಫಲ ಸಿಗುವುದು ನಿಶ್ಚಿತ’ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ‘ಸೆಸ್ಕ್‌ನಿಂದ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಸಂಸ್ಥೆಯ ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮಾಡಿ, ತ್ವರಿತವಾಗಿ ಸೇವೆ ಒದಗಿಸುವ ಗುರಿ ನಿಮ್ಮದಾಗಲಿ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು, ಸಿಹಿ ಘಟನೆಗಳ ಪ್ರೇರಣೆಯೊಂದಿಗೆ ಮುನ್ನಡೆಯೋಣ’ ಎಂದು ತಿಳಿಸಿದರು.
ನಿಗಮದ ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಮಾತನಾಡಿ, ‘ಹಿಂದಿನ ವರ್ಷ ಎಲ್ಲರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಜವಾಬ್ದಾರಿಗಳನ್ನು ಅರಿತು, ತಂಡವಾಗಿ ಕೆಲಸ ಮಾಡೋಣ. ಶ್ರೇಯಸ್ಸು ನಮ್ಮದಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.