ADVERTISEMENT

ಅಪೌಷ್ಟಿಕ ಮಕ್ಕಳಿಗೆ ಸಿಎಫ್‌ಟಿಆರ್‌ಐ ‘ಕಿಟ್’

ಪೂರಕ ಪೌಷ್ಟಿಕ ಆಹಾರದ ಕಿಟ್; ಬಿಎನ್‌ಪಿಎಂ ಆರ್ಥಿಕ ನೆರವು

ಎಂ.ಮಹೇಶ್
Published 8 ಜೂನ್ 2025, 19:47 IST
Last Updated 8 ಜೂನ್ 2025, 19:47 IST
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನೋಟ
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನೋಟ   

ಮೈಸೂರು: ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಇಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಅಂಗನವಾಡಿ ಕೇಂದ್ರಗಳ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕೈಜೋಡಿಸಿದೆ.

ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 2ರಿಂದ 5 ವರ್ಷದೊಳಗಿನ 2,100 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗುರುತಿಸಲಾಗಿದೆ. ಅದರಲ್ಲಿ ಮೊದಲ ಹಂತದಲ್ಲಿ 650 ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಆರು ತಿಂಗಳವರೆಗೆ ‘ಪೂರಕ ಪೌಷ್ಟಿಕ ಆಹಾರ ಪೂರೈಕೆ’ಯ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ.

ಈ ಬಡ ಹಾಗೂ ಮಧ್ಯಮ ವರ್ಗದವರ ಮಕ್ಕಳಿಗೆ ‘ಶಕ್ತಿ’ ತುಂಬುವ ಕಾರ್ಯಕ್ಕೆ ಸಿಎಫ್‌ಟಿಆರ್‌ಐ ಜೊತೆ ಮೈಸೂರಿನದ್ದೇ ಆದ ಬ್ಯಾಂಕ್ ನೋಟ್ ಪೇಪರ್ ಮಿಲ್ (ಬಿಎನ್‌ಪಿಎಂ– ನೋಟು ಕಾಗದ ಮುದ್ರಣ ಕಾರ್ಖಾನೆ) ತನ್ನ ಸಿಎಸ್‌ಆರ್‌ (ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ) ನಿಧಿಯೊಂದಿಗೆ ಕೈಜೋಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರ ನೀಡಿವೆ.

ADVERTISEMENT

ವೈಜ್ಞಾನಿಕ ಸಲಹೆ ಆಧರಿಸಿ:

ಈ ಮಕ್ಕಳಿಗೆ ಸಿಎಫ್‌ಟಿಆರ್‌ಐ ವಿಜ್ಞಾನಿಗಳ ತಾಂತ್ರಿಕ ಹಾಗೂ ವೈಜ್ಞಾನಿಕ ಸಲಹೆಯನ್ನು ಆಧರಿಸಿ, ಪ್ರೋಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ‘ಸಿದ್ಧಪಡಿಸಿದ ಆಹಾರದ ಕಿಟ್‌’ಗಳನ್ನು ವಿತರಣೆಗೆ ಚಾಲನೆ ನೀಡಲಾಗಿದೆ. ಇದನ್ನು ಸೇವಿಸುವುದರಿಂದ ಆ ಮಕ್ಕಳಲ್ಲಿ ಆಗಬಹುದಾದ ಬದಲಾವಣೆ ಅಥವಾ ಸುಧಾರಣೆಯನ್ನು ವಿಶ್ಲೇಷಿಸಲಾಗುವುದು. ಇದರ ಯಶಸ್ಸನ್ನು ಆಧರಿಸಿ ಇತರ ಮಕ್ಕಳಿಗೂ ‘ಸಿದ್ಧಪಡಿಸಿದ ಆಹಾರದ ಕಿಟ್’ ನೀಡುವುದಕ್ಕೆ ಉದ್ದೇಶಿಸಲಾಗಿದೆ.

ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ, ಅಪೌಷ್ಟಿಕತೆಗೆ ಕಾರಣವಾದ ಅಂಶಗಳನ್ನು ಅವಲೋಕಿಸಿ ಅವರಿಗೆ ಎಂತಹ ಪೂರಕ ಪೌಷ್ಟಿಕ ಆಹಾರ ಕೊಡಬೇಕು ಎಂಬುದನ್ನು ನಿರ್ಣಯಿಸಲಾಗಿದೆ. ಯಾವ ಪೋಷಕಾಂಶ ಪ್ರಮಾಣ ಕಡಿಮೆ ಇದೆ ಎಂಬುದನ್ನು ಗುರುತಿಸಲಾಗಿದ್ದು, ಅದಕ್ಕೆ ತಕ್ಕಂತೆ ಪೋಷಕಾಂಶ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಪೌಷ್ಟಿಕಾಂಶ ದೊರೆಯಲೆಂದು:

‘ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಪೂರಕ ಪೋಷಕಾಂಶ ಒದಗಿಸುವ ಇಂತಹ ಕಾರ್ಯಕ್ರಮಗಳು ಅಗತ್ಯವಿದೆ. ಸಿಎಫ್‌ಟಿಆರ್‌ನಿಂದ ನೀಡಲಾಗುವ ಆಹಾರದ ಕಿಟ್‌ಗಳನ್ನು ಅಂಗನವಾಡಿಗಳಲ್ಲಿ ಗುರುತಿಸಲಾದ ಮಕ್ಕಳಿಗೆ ವಿತರಿಸಲಾಗುವುದು. ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ವಿತರಿಸಲಾಗಿದೆ. ಉಳಿದವುಗಳನ್ನು ಸಿದ್ಧಪಡಿಸುವ ಕೆಲಸವನ್ನು ಸಂಶೋಧನಾಲಯ ಮಾಡುತ್ತಿದೆ’ ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ನಂಜನಗೂಡು ಮತ್ತು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಪ್ರಾಯೋಗಿಕವಾಗಿ ನಡೆಸಿದ್ದ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮದ ಯಶಸ್ಸನ್ನು ಆಧರಿಸಿ ಇಲ್ಲೂ ತಾಂತ್ರಿಕ ಸಹಕಾರದೊಂದಿಗೆ ಕಿಟ್‌ ವಿತರಣೆಗೆ ಕ್ರಮ ವಹಿಸಲಾಗಿದೆ’ ಎನ್ನುತ್ತಾರೆ ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಾ ಸಿಂಗ್.

ಈಗ ಗುರುತಿಸಲಾಗಿರುವ ಅಪೌಷ್ಟಿಕ ಮಕ್ಕಳ ರಕ್ತಪರೀಕ್ಷೆ ನಡೆಸಲಾಗಿದೆ. ಆರು ತಿಂಗಳ ನಂತರ ಮತ್ತೊಮ್ಮೆ ನಡೆಸಿ ಆರೋಗ್ಯದ ಸ್ಥಿತಿ ವಿಶ್ಲೇಷಿಸಲಾಗುವುದು
ಸಿರಾಜ್ ಮಹಮದ್ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಕಿಟ್‌ನಲ್ಲೇನಿರಲಿದೆ?

ಸಿಎಫ್‌ಟಿಆರ್‌ಐ ಸಿದ್ಧಪಡಿಸುವ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ನೀಡಲಾಗುತ್ತದೆ. ಸೋಮವಾರ ಮತ್ತು ಗುರುವಾರ 8.1 ಗ್ರಾಂ. ಪ್ರೋಟೀನ್ 4 ಮಿ.ಗ್ರಾಂ. ಕಬ್ಬಿಣಾಂಶ 100 ಮಿಗ್ರಾಂ ಕ್ಯಾಲ್ಸಿಯಂ ಒಳಗೊಂಡಿರುವ ಬರ್ಫಿ ಮಂಗಳವಾರ 5 ಗ್ರಾಂ. ಪ್ರೋಟೀನ್ 4 ಮಿ.ಗ್ರಾಂ. ಕಬ್ಬಿಣಾಂಶ ಒಳಗೊಂಡಿರುವ ಬಿಸ್ಕತ್ತುಗಳನ್ನು 3.8 ಮಿ.ಗ್ರಾಂ. ಸತುವನ್ನು ಒಳಗೊಂಡಿರುವ ಮಾವಿನ ಬಾರ್ ಬುಧವಾರ 4. ಗ್ರಾಂ. ಪ್ರೋಟೀನ್ ಮತ್ತು 1.3 ಗ್ರಾಂ. ಕಬ್ಬಿಣಾಂಶ ಒಳಗೊಂಡಿರುವ ಸ್ಪಿರುಲಿನಾ ಚಿಕ್ಕಿ ಶುಕ್ರವಾರ 40 ಮಿ.ಗ್ರಾಂ. ವಿಟಮಿನ್ ‘ಸಿ’ ಮತ್ತು 3 ಮಿ.ಗ್ರಾಂ. ಕಬ್ಬಿಣಾಂಶ ಒಳಗೊಂಡಿರುವ ಮ್ಯಾಂಗೊಬಾರ್ ಮತ್ತು ಗ್ಲೂಕೋಸ್ ಆಮ್ಲ ಪಾನೀಯ; ಶನಿವಾರ ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.