ADVERTISEMENT

ಮುಂದುವರಿದ ಸರಗಳ್ಳರ ನೂತನ ತಂತ್ರ

ಮತ್ತೆ ನಗರದಲ್ಲಿ ಮಹಿಳೆಯನ್ನು ಕೆಳಗೆ ಬೀಳಿಸಿ ಸರಗಳ್ಳತನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:03 IST
Last Updated 12 ಡಿಸೆಂಬರ್ 2019, 10:03 IST

ಮೈಸೂರು: ಹಿಂದಿನಿಂದ ಬಂದು ಮಹಿಳೆಯರನ್ನು ಕೆಳಗೆ ಬೀಳಿಸಿ ಸರಗಳವು ಮಾಡುವ ಸರಗಳ್ಳರ ನೂತನ ತಂತ್ರಗಾರಿಕೆ ಮುಂದುವರಿದಿದೆ.

ಶ್ರೀರಾಂಪುರದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಗೀತಾ ಎಂಬುವವರ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಇದೇ ತಂತ್ರ ಬಳಸಿ ಸಂಜೆ 4.30ರ ಸಮಯದಲ್ಲಿ ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಎದುರಿಗೆ ಸ್ಕೂಟರ್‌ನಲ್ಲಿ ಬಂದು ಕಳ್ಳ ಸ್ವಲ್ಪ ದೂರ ತೆರಳಿ ಮತ್ತೆ ವಾಪಸ್ ಹಿಂದಿನಿಂದ ಕಳ್ಳ ಬಂದಿದ್ದಾನೆ. ಸರ ಕಿತ್ತುಕೊಳ್ಳುವ ಭರದಲ್ಲಿ ಮಹಿಳೆಯನ್ನು ಕೆಳಗೆ ತಳ್ಳಿ ಬೀಳಿಸಿದ್ದಾನೆ. ಗೀತಾ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಒಟ್ಟು 40 ಗ್ರಾಂ ತೂಕದ ಚಿನ್ನದ ಸರದಲ್ಲಿ 10 ಗ್ರಾಂ ಮಾತ್ರ ಕಳ್ಳನ ಕೈಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾ ಅವರ ಹಣೆಗೆ ಪೆಟ್ಟಾಗಿದೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಈಚೆಗಷ್ಟೇ ಅಗ್ರಹಾರದ ಉತ್ತರಾದಿಮಠದ ರಸ್ತೆಯಲ್ಲಿಯೂ ಇದೇ ತಂತ್ರ ಬಳಸಿ ಸರಗಳ್ಳನೊಬ್ಬ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಮಹಿಳೆಯರು ಓಡಾಡುವಾಗ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಹಿಂಬಾಗಿಲು ಮುರಿದು ಕಳ್ಳತನ

ಮೈಸೂರಿನಕುವೆಂಪುನಗರದ ಅನಂತೇಶ್‌ ಎಂಬುವವರ ಮನೆಯ ಹಿಂಬಾಗಿಲು ಮುರಿದ ಕಳ್ಳರು ₹ 2.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.‌‌

ಇವರು ಕೊಡಗಿಗೆ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಸಮೀಪದ ದೊಡ್ಡಹೊಸೂರು ಗ್ರಾಮದ ನಿವಾಸಿ ರುದ್ರೇಶ್‌ ಎಂಬುವವರ ಮನೆಯಲ್ಲಿ ₹ 58 ಸಾವಿರ ಮೌಲ್ಯದ ಚಿನ್ನಾಭರಣಗಳು ಹಾಗೂ ₹ 6 ಸಾವಿರ ನಗದು ಕಳವಾಗಿವೆ.

ಇವರು ಮನೆಯಲ್ಲಿ ಯಾರೂ ಇಲ್ಲದಿರುವಾಗ ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೈಲಕುಪ್ಪೆ ಠಾಣೆಯಲ್ಲಿ ದಾಖಲಾಗಿದೆ.

ಮೃತದೇಹ ಪತ್ತೆ

ತಲಕಾಡಿನ ನಿಸರ್ಗಧಾಮದ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಬೆಂಗಳೂರಿನ ಅಭಿಷೇಕ್ ಅವರ ಮೃತದೇಹ ಬುಧವಾರ ಪತ್ತೆಯಾಗಿದೆ.

ಸೋಮವಾರ ಇಲ್ಲಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಹೆಬ್ಬಾಳದ ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್‌ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಆಲ್ಫ್ರೆಡ್‍ ವಿಜಯ್ (16) ಹಾಗೂ ಹೇಮಂತ್ (17) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅಂದು ಆಲ್ಫ್ರೆಡ್‍ ವಿಜಯ್ ಅವರ ಮೃತದೇಹ ದೊರಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.