ADVERTISEMENT

ನಿದ್ರೆ ಔಷಧ ನೀಡಿ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 15:49 IST
Last Updated 24 ಡಿಸೆಂಬರ್ 2018, 15:49 IST

ಮೈಸೂರು: ಯುವಕರಿಗೆ ಉಚಿತವಾಗಿ ಮಸಾಜ್‌ ಮಾಡುವುದಾಗಿ ನಂಬಿಸಿ ನಿದ್ರಾ ಔಷಧ ನೀಡಿ ಚಿನ್ನಾಭರಣಗಳನ್ನು ಕದ್ದೊಯ್ಯುವ ಜಾಲ ನಗರದಲ್ಲಿ ಪತ್ತೆಯಾಗಿದೆ.

ಹೌದು. ಯುವಕರ ಮೊಬೈಲ್‌ ನಂಬರ್‌ ಸಂಗ್ರಹಿಸುವ ಈ ಜಾಲವು ತಾವು ಹೋಟೆಲಿಂದ ಕರೆ ಮಾಡಿರುವುದಾಗಿ ತಿಳಿಸಿ ಉಚಿತ ಮಸಾಜ್‌ ಮಾಡುವುದಾಗಿ ನಂಬಿಸುತ್ತಾರೆ. ಲಾಡ್ಜಿಗೆ ಬಂದ ಯುವಕರಿಗೆ ಪ್ರಜ್ಞೆ ತಪ್ಪಿಸಲೆಂದು ನಿದ್ರಾ ಔಷಧ ಇರುವ ಜ್ಯೂಸ್‌ ಕುಡಿಸಿ, ಆಭರಣ ಕಸಿದುಕೊಂಡು ಪರಾರಿಯಾಗುವುದು ಪತ್ತೆಯಾಗಿದೆ. ಎರಡು ಪ್ರಕರಣಗಳಲ್ಲಿ ₹ 87 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಯುವಕರು ಕಳೆದುಕೊಂಡಿದ್ದಾರೆ.

ಮೋಹನ್ ಕುಮಾರ್ ಎಂಬ ಯುವಕ ₹ 48 ಸಾವಿರ ಮೌಲ್ಯದ 16 ಗ್ರಾಂ ತೂಕದ ಚಿನ್ನದ ಸರ ಹಾಗೂ ಪವನ್‌ಕುಮಾರ್‌ ಎಂಬಾತ 49 ಸಾವಿರ ಮೌಲ್ಯದ 18 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಡಿ. 1ರಂದು ಮೋಹನ್ ಕುಮಾರ್ ಅವರಿಗೆ ದೀಪಕ್ ಎಂಬಾತ ಕರೆ ಮಾಡಿ ಉಚಿತ ಮಸಾಜ್ ಮಾಡುವುದಾಗಿ ತಿಳಿಸಿದ್ದನು. ಸಂಗಮ್‌ ಚಿತ್ರಮಂದಿರ ಬಳಿಯ ಲಾಡ್ಜ್‌ಗೆ ಬರುವಂತೆ ತಿಳಿಸಿದ್ದನು. ಲಾಡ್ಜಿಗೆ ಹೋಗುತ್ತಿದ್ದಂತೆ ಜ್ಯೂಸ್‌ ನೀಡಿದ್ದು, ಕುಡಿದ ಬಳಿಕ ಪ್ರಜ್ಞೆ ಹೋಗಿದೆ. ಎಚ್ಚರವಾದಾಗ ಆಭರಣ ಕಳುವಾಗಿರುವುದು ತಿಳಿದುಬಂದಿದೆ.

ADVERTISEMENT

ಅಂತೆಯೇ, ಅ. 16ರಂದು ಪವನ್ ಕುಮಾರ್ ಎಂಬುವರಿಗೆ ಲಾರೆನ್ಸ್ ಎಂಬಾತ ಕರೆ ಮಾಡಿ, ಉಚಿತವಾಗಿ ಮಸಾಜ್ ಮಾಡುವುದಾಗಿ ಹೇಳಿದ್ದಾನೆ. ಇರ್ವಿನ್‌ ರಸ್ತೆಯ ಲಾಡ್ಜಿಗೆ ಬರುವಂತೆ ಹೇಳಿ ಜ್ಯೂಸ್ ನೀಡಿ ಆಭರಣ ಕದ್ದು ಪರಾರಿಯಾಗಿದ್ದಾನೆ.

ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.