ADVERTISEMENT

ಮೈಸೂರು: ನಗರದ ವಿವಿಧೆಡೆ ಚಾಮುಂಡಿಗೆ ಪೂಜೆ

ಮಹಿಳೆಯರಿಗೆ ಬಾಗಿನ, ಭಕ್ತರಿಗೆ ಪ್ರಸಾದ ವಿತರಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 3:18 IST
Last Updated 18 ಜುಲೈ 2025, 3:18 IST
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ‘ಚಾಮುಂಡೇಶ್ವರಿ ವರ್ಧಂತಿ’ ಪ್ರಯುಕ್ತ ಉತ್ಸವ ಮೂರ್ತಿಗೆ ದೇವಾಲಯದ ಮುಖ್ಯ ಅರ್ಚಕ ಶಶಿಶೇಖರ ದೀಕ್ಷಿತ್ ಆರತಿ ಬೆಳಗಿದರು -ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ‘ಚಾಮುಂಡೇಶ್ವರಿ ವರ್ಧಂತಿ’ ಪ್ರಯುಕ್ತ ಉತ್ಸವ ಮೂರ್ತಿಗೆ ದೇವಾಲಯದ ಮುಖ್ಯ ಅರ್ಚಕ ಶಶಿಶೇಖರ ದೀಕ್ಷಿತ್ ಆರತಿ ಬೆಳಗಿದರು -ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಶಕ್ತಿದೇವತೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಪ್ರಯುಕ್ತ  ಚಾಮುಂಡಿ ಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆದರೆ, ನಗರದ ವಿವಿಧೆಡೆ ದೇವಿಯ ಹುಟ್ಟುಹಬ್ಬವನ್ನು ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆ 8 ಗಂಟೆಗೆ ಬೆಟ್ಟದ ಪಾದದಿಂದ ದೇವಿಯ ದರ್ಶನಕ್ಕೆ ತೆರಳಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಅಪಾರ ಸಂಖ್ಯೆಯ ಭಕ್ತರು ‘ಜೈ ದುರ್ಗೆ, ಜೈ ಚಾಮುಂಡೇಶ್ವರಿ’ ಎಂಬ ಘೋಷಣೆ ಕೂಗುತ್ತ ಬೆಟ್ಟ ಹತ್ತಿದ್ದರು.

ದೇಗುಲವನ್ನು ಬಣ್ಣಬಣ್ಣದ ಸೇವಂತಿಗೆ, ಸುಂಗಂಧರಾಜ, ಗುಲಾಬಿ, ಚೆಂಡು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ದ್ವಾರಗಳು, ನವರಂಗಗಳು ವಿವಿಧ ಪುಷ್ಪಗಳಿಂದ ಕಂಗೊಳಿಸಿದವು.  

ADVERTISEMENT
ಪಲ್ಲಕ್ಕಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ಕುಮಾರಿ ಜಿ.ಟಿ.ದೇವೇಗೌಡ ಪೂಜೆ ಸಲ್ಲಿಸಿ ಎಳೆದರು

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್‌ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿ ಎದುರು ಕುಳಿತು ಪ್ರಾರ್ಥಿಸಿದ ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿರಿಸಿ ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು.

ನಂತರ 10.15ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ವಿಶೇಷವಾಗಿ ಅಲಂಕೃತಗೊಂಡಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿ ಇರಿಸಿ ಮೆರವಣಿಗೆ ಮಾಡಲಾಯಿತು. ಶಾಸಕ ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಹಾಜರಿದ್ದರು. 

ಯದುವೀರ್ ಮಾತನಾಡಿ, ‘ಆಷಾಢ ಮಾಸದ ರೇವತಿ ನಕ್ಷತ್ರದ ದಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಚಾಮುಂಡೇಶ್ವರಿ ಉತ್ಸವಮೂರ್ತಿ ಸ್ಥಾಪಿಸಿದ್ದರು. ಅದರ ನೆನಪಿಗೆ ವರ್ಧಂತಿ ಮಹೋತ್ಸವ ಆಚರಿಸಲಾಗುತ್ತಿದೆ’ ಎಂದರು.  

ಹಳೆ ಜಿಲ್ಲಾಧಿಕಾರಿ ಕಚೇರಿ ಎದುರು ‘ಡಿ.ಸಿ ಸಮೃದ್ಧಿ ಸೌಹಾರ್ದ ಬಳಗ’ದ ಸದಸ್ಯರು ನಾಗರಿಕರಿಗೆ ಪ್ರಸಾದ ವಿತರಿಸಿದರು. ಸುನಿಲ್ ಹಾಗೂ ಇತರರು ಭಾಗವಹಿಸಿದ್ದರು 

ರಾಷ್ಟ್ರಾಶೀರ್ವಾದ: ರಾತ್ರಿ 8.30ಕ್ಕೆ ಉತ್ಸವ ಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ನಡೆಸಿ, ರಾಷ್ಟ್ರಾಶೀರ್ವಾದ ಸಲ್ಲಿಸಲಾಯಿತು. ಭಕ್ತರಿಗೆ ಅರಣ್ಯ ಇಲಾಖೆಯ ಜಾಗದಲ್ಲಿ ಪ್ರಸಾದ ವಿತರಿಸಲಾಯಿತು.  

ಬಾಗಿನ ವಿತರಣೆ: ಬೆಟ್ಟದ ‍ಪಾದದಲ್ಲಿ ಶ್ರೀದುರ್ಗಾ ಹಾಗೂ ಕೆ.ವಿ.ಕೆ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪಾಲ್ಗೊಂಡು, ಪೌರಕಾರ್ಮಿಕ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಸೀರೆ, ಕುಂಕುಮ, ಅರಿಶಿಣ, ಬಳೆ ಒಳಗೊಂಡ ಬಾಗಿನ ವಿತರಿಸಿ ಶುಭ ಕೋರಿದರು. 

ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆವಿಕೆ ಫೌಂಡೇಶನ್ ಅಧ್ಯಕ್ಷೆ ಖುಷಿ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಚಿಕ್ಕಮಗಳೂರು ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ದೀಪಾ, ಅಶ್ವಿನಿ ಗೌಡ, ಸುಶೀಲಾ, ಸರಸ್ವತಿ ಹಲಸಗಿ, ರಾಣಿ ಪ್ರಭಾ ಇದ್ದರು.

ಮಹಾರಾಜ ಕಾಲೇಜು ಬಳಿ ಇರುವ ಆರ್.ಆರ್.ಮೆಸ್‌ ಸದಸ್ಯರು ಪ್ರಸಾದ ವಿತರಿಸಿದರು
ವಿದ್ಯಾರಣ್ಯಪುರಂನಲ್ಲಿ ‘ಜೈ ಭುವನೇಶ್ವರಿ ಕನ್ನಡ ಬಳಗ’ವು ಆಯೋಜಿಸಿದ್ದ ಪ್ರಸಾದ ವಿತರಣೆಯಲ್ಲಿ ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಎಂ.ಸುನಿಲ್ ಜೋಗಿ ಮಹೇಶ್ ಅಶೋಕಪುರಂ ಮಂಜುನಾಥ್ ರವಿಶಂಕರ್ ಶಂಕರ್ ಬಾಸ್ ವಿನಯ್ ಕುಮಾರ್ ನಾಗರಾಜು ಸಾಗರ್ ಶಶಿಕಾಂತ್ ನಂದ ನವೀನ್ ಪ್ರದೀಪ್ ಶರತ್ ರಾಹುಲ್ ಶ್ರೀಧರ್ ಪಾಲ್ಗೊಂಡರು

ಎಲ್ಲೆಡೆ ಪೂಜೆ ಪ್ರಸಾದ ವಿತರಣೆ

ವಿಜಯನಗರದ ಸಪ್ತಮಾತ್ರಿಕ ಚೌಡೇಶ್ವರಿ ಕೆ.ಜಿ.ಕೊಪ್ಪಲು ವಿದ್ಯಾರಣ್ಯಪುರಂ ಶ್ರೀರಾಂಪುರದ ಚಾಮುಂಡೇಶ್ವರಿ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇಗುಲ ಆರ್‌.ಟಿ.ನಗರದ ಉರುಕಾತೇಶ್ವರಿ ದೇಗುಲ ಸೇರಿದಂತೆ ಶಕ್ತಿ ದೇಗುಲಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ನಗರದ ವಿವಿಧ ರಸ್ತೆಗಳು ವೃತ್ತಗಳಲ್ಲಿ ದೇವಿಯ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ದೇವರಾಜ ಮೊಹಲ್ಲಾದ ಶ್ರೀ ರಾಮಮಂದಿರದ ಮುಂಭಾಗ ಮಹಾರಾಜ ಕಾಲೇಜು ಹಳೆ ಜಿಲ್ಲಾಧಿಕಾರಿ ಕಚೇರಿ ಅಗ್ರಹಾರ ವೃತ್ತ ಚಾಮುಂಡಿಪುರಂ ಕುವೆಂಪುನಗರ ಒಂಟಿಕೊಪ್ಪಲು ಆರ್‌ಟಿಒ ವೃತ್ತ ವಿದ್ಯಾರಣ್ಯಪುರಂ ಸಿದ್ಧಾರ್ಥನಗರ ಬಸವೇಶ್ವರ ರಸ್ತೆ ರಾಮಸ್ವಾಮಿ ವೃತ್ತದ ಬಳಿ ಸೇರಿದಂತೆ ಹಲವೆಡೆ ಪ್ರಸಾದ ವಿತರಿಸಲಾಯಿತು.

ಚಾಮುಂಡಿ ಬೆಟ್ಟದ ಪಾದದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.