ADVERTISEMENT

‘ಬೆಟ್ಟದ ತಾಯಿ’ ಕಾಣಲು ಜನಸಾಗರ

‘ಗಜಲಕ್ಷ್ಮಿ ಅಲಂಕಾರ’ದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ದೇವಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:59 IST
Last Updated 12 ಜುಲೈ 2025, 5:59 IST
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ 3ನೇ ಶುಕ್ರವಾರ ಉತ್ಸವ ಮೂರ್ತಿಗೆ ಗಜಲಕ್ಷ್ಮಿ ಅಲಂಕಾರ ಮಾಡಿರುವುದು
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸದ 3ನೇ ಶುಕ್ರವಾರ ಉತ್ಸವ ಮೂರ್ತಿಗೆ ಗಜಲಕ್ಷ್ಮಿ ಅಲಂಕಾರ ಮಾಡಿರುವುದು   

ಮೈಸೂರು: ಚುಮು ಚುಮು ಚಳಿ, ಮಂಜಿನ ವಾತಾವರಣ, ದಿಢೀರ್ ಬೀಳುತ್ತಿದ್ದ ತುಂತುರು ಮಳೆಯ ನಡುವೆ ಸಾವಿರಾರು ಭಕ್ತರು, ಆಷಾಢ ಮಾಸದ 3ನೇ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತ ಭಾವ ತಳೆದರು.

ಮುಂಜಾನೆಯಿಂದ ರಾತ್ರಿವರೆಗೂ ಸಹಸ್ರಾರು ಮಂದಿ ಭಕ್ತರು ಬೆಟ್ಟಕ್ಕೆ ಬಂದಿದ್ದರು. ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಲಲಿತಮಹಲ್ ಮೈದಾನದ ಬಳಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದ ಸಾಮಾನ್ಯ ಜನರು, ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಬಂದು ‘ಬೆಟ್ಟದ ತಾಯಿ’ಯನ್ನು ಕಣ್ತುಂಬಿಕೊಂಡರು. ವಿಐಪಿಗಳು ಸೇರಿದಂತೆ ಶಿಷ್ಟಾಚಾರದ ಪ್ರಕಾರ ಅವಕಾಶ ಇರುವವರಿಗೆ ಮಾತ್ರ ಬೆಟ್ಟದ ಮೇಲೆ ವಾಹನಗಳಲ್ಲಿ ಬರಲು ಅವಕಾಶ ನೀಡಲಾಗಿತ್ತು. ವಿಐಪಿಗಳ ಆಗಮನದ ಕಿರಿಕಿರಿ, ಸರ್ಕಾರಿ ನೌಕರರು ಹಾಗೂ ಪೊಲೀಸರು ಮತ್ತವರ ಕುಟುಂಬದವರ ಆಗಮನದಂದ ಉಂಟಾಗುತ್ತಿದ್ದ ವಿಳಂಬದ ನಡುವೆಯೂ ಭಕ್ತರು ಕಾದು ದರ್ಶನ ಪಡೆದರು.

ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ದೇವಿಗೆ ಮಹನ್ಯಾಸ, ರುದ್ರಾಭಿಷೇಕ, ಪುಷ್ಪಾರ್ಚನೆ, ಅಲಂಕಾರ, ಮಂಗಳಾರತಿ ನಂತರ, ಬೆಳಿಗ್ಗೆ 5.30ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ADVERTISEMENT

ಚಾಮುಂಡೇಶ್ವರಿ ದೇವಿ ‘ಲಕ್ಷ್ಮೀ’ ಅಲಂಕಾರದಲ್ಲಿ ರಾರಾಜಿಸಿದರೆ, ಉತ್ಸವ ಮೂರ್ತಿಗೆ ಮೊದಲ ಬಾರಿಗೆ ‘ಗಜಲಕ್ಷ್ಮಿ’ ಅಲಂಕಾರ ಮಾಡಲಾಗಿತ್ತು. ಆನೆಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿದಂತೆ ಸಿಂಗರಿಸಲಾಗಿತ್ತು. ದೇವಾಲಯದ ಒಳಾವರಣವನ್ನು ಕಮಲ ಸೇರಿದಂತೆ ಹಲವು ಹೂಗಳಿಂದ ಅಲಂಕರಿಸಲಾಗಿತ್ತು. ಬಣ್ಣ, ಬಣ್ಣದ ಹೂವಿನ ರಾಶಿ ಉತ್ಸವಕ್ಕೆ ಮೆರುಗು ತುಂಬಿತು. ಇದನ್ನು ಭಕ್ತರು ಕಣ್ತುಂಬಿಕೊಂಡರು.

ಚಾಮುಂಡಿ ಬೆಟ್ಟಕ್ಕೆ ಮುಂಜಾನೆ 5ರಿಂದ‌ ಮೆಟ್ಟಿಲಿನ ಮೂಲಕ ತೆರಳಿ ಭಕ್ತರು ದರ್ಶನ ಪಡೆದರೆ, ಇನ್ನೊಂದೆಡೆ ಉಚಿತ ಬಸ್‌ ಮೂಲಕ ಹಾಗೂ ₹2ಸಾವಿರ, ₹300ರ ಟಿಕೆಟ್‌ ಪಡೆದು ಜನರು ದರ್ಶನ ಪಡೆದರು. ಹರಕೆ ಹೊತ್ತ ಮಹಿಳೆಯರು, ಮೆಟ್ಟಿಲಿಗೆ ಕುಂಕುಮ ಹಚ್ಚಿ, ದೇವಿಗೆ ಜಯಘೋಷ ಹಾಕುತ್ತಾ ಸಾಗಿದರು. ದೇವಿ ದರ್ಶನ ಮುಗಿಸಿಕೊಂಡು ಬಂದ ಭಕ್ತರಿಗೆ ರೈಸ್‌ಬಾತು, ಮೊಸರನ್ನ ವಿತರಿಸಲಾಯಿತು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಕುಟುಂಬದವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕುಟುಂಬ, ಮಕ್ಕಳ ಮತ್ತು ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕುಟುಂಬದವರು, ಶಾಸಕರಾದ ಎಚ್‌.ಡಿ. ರೇವಣ್ಣ, ಎ.ಮಂಜು, ವಿಧಾನಪರಿಷತ್‌ ಸದಸ್ಯರಾದ ಎಚ್‌.ಎಂ. ರೇವಣ್ಣ, ಸೂರಜ್ ರೇವಣ್ಣ, ಚಲನಚಿತ್ರ ನಟರಾದ ಶಶಿಕುಮಾರ್, ವಶಿಷ್ಠ ಸಿಂಹ ಮೊದಲಾದವರು ವಿಶೇಷ ಪೂಜೆ ಸಲ್ಲಿಸಿದರು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲಿನ ಮೂಲಕ ಭಕ್ತರು ತೆರಳಿದರು– ಪ್ರಜಾವಾಣಿ ಚಿತ್ರ:ಅನೂಪ್ ರಾಘ.ಟಿ.
ಮೈಸೂರಿನ ರಮಾವಿಲಾಸ ರಸ್ತೆ ಸಮೀಪದ ಚಾಮುಂಡೇಶ್ವರಿ ಟೀ ಸ್ಟಾಲ್ ಸದಸ್ಯರು ಆಷಾಢ ಶುಕ್ರವಾರ ಸಾರ್ವಜನಿಕರಿಗೆ ಪ್ರಸಾದ ಹಂಚಿದರು. ರಾಮು ಅರ್ಜುನ್ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಕುಂಚಿಟಿಗರ ಮಹಾಲಕ್ಷ್ಮೀ ಕೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ಶುಕ್ರವಾರ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಮೈಸೂರಿನ ಜೆ.ಸಿ. ನಗರದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢದ 3ನೇ ಶುಕ್ರವಾರದ ಪ್ರಯುಕ್ತ ದೇವಿಮೂರ್ತಿಗೆ ಗೆಜ್ಜೆ ವಸ್ತ್ರ ಹಾಗೂ ಬತ್ತಿಯಿಂದ ಅಲಂಕಾರ ಮಾಡಲಾಗಿತ್ತು

ಭಕ್ತರ ತಳ್ಳಾಟ: ಪ್ರಾಧಿಕಾರದ ವಿರುದ್ಧ ಆಕ್ರೋಶ

ಧರ್ಮದರ್ಶನದ ಸಾಲಿನಲ್ಲಿ ಬಂದವರು ದೇವರ ದರ್ಶನ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಯಿತು. ಬೆಳಿಗ್ಗೆ 6.30ಕ್ಕೆ ಸರದಿ ಸಾಲಿನಲ್ಲಿ ನಿಂತವರಿಗೆ 11.30 ಕಳೆದರೂ ದೇವಾಲಯ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ವಿಐಪಿಗಳ ಆಗಮನದ ಬಳಿಕ ಸಮಸ್ಯೆ ಬಿಗಡಾಯಿಸಿತು. ಸಂಜೆಯಾಗುತ್ತಿದ್ದಂತೆ ಭಕ್ತರು ಬ್ಯಾರಿಕೇಡ್‌ ದೂಡಿ ತೆರಳಲು ಯತ್ನಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ‘₹ 300 ₹ 2ಸಾವಿರ ಟಿಕೆಟ್‌ ಪಡೆದರೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಕಡೆ ಅಧಿಕಾರಿಗಳೊಂದಿಗೆ ಭಕ್ತರು ಮಾತಿನ ಚಕಮಕಿ ನಡೆಸಿದರು. ಅವ್ಯವಸ್ಥೆಯ ಬಗ್ಗೆ ನಗರ ಪೊಲೀಸ್‌ ಆಯುಕ್ತೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಆಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ನಡುವೆ ನಡೆದ ಮಾತಿನ ಚಕಮಕಿಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ‘ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದಿದ್ದರೆ ವ್ಯವಸ್ಥೆ ಸರಿಯಾಗುವುದು ಹೇಗೆ’ ಎನ್ನುವುದು ಭಕ್ತರ ‍ಪ್ರಶ್ನೆಯಾಗಿದೆ.

ನಗರದೆಲ್ಲೆಡೆ ದೇವಿ ಆರಾಧನೆ

ನಗರದ ವಿವಿಧ ಕಡೆಗಳಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ಹಂಚಿದರು. ಪಲಾವ್ ರೈಸ್‌ಬಾತ್‌ ಸಿಹಿ ಹಂಚಿದರು. ಬೆಂಗಳೂರಿನ ಚಾಮುಂಡೇಶ್ವರಿ ಸೇವಾ ಸಮಿತಿಯ 25 ಜನರ ತಂಡದವರು ಚಾಮುಂಡಿ ಬೆಟ್ಟದ ದಾಸೋಹ ವ್ಯವಸ್ಥೆ ಮಾಡಿದ್ದ ಜಾಗದ ಬಳಿ ಭಕ್ತರಿಗೆ 40ಸಾವಿರ ಲಡ್ಡು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.