ಮೈಸೂರು: ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ‘ಗೃಹಲಕ್ಷ್ಮಿ’ ಯೋಜನೆಯ 59 ತಿಂಗಳ ಹಣವನ್ನು ಕಾಣಿಕೆಯಾಗಿ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಬ್ಯಾಂಕ್ ಖಾತೆಗೆ ಸೋಮವಾರ ₹ 1.18 ಲಕ್ಷ ಜಮೆ ಮಾಡಿದ್ದ ಸಚಿವೆ, ‘ಗೃಹಲಕ್ಷ್ಮಿ ಗ್ಯಾರಂಟಿ’ ಹಣ ಸಲ್ಲಿಸುವಂತೆ ಹೇಳಿದ್ದರು. ಅದರಂತೆ ದಿನೇಶ್ ಅವರು ಬೆಟ್ಟಕ್ಕೆ ಭೇಟಿ ನೀಡಿ, ಮಾಸಿಕ ₹ 2 ಸಾವಿರದಂತೆ 59 ತಿಂಗಳ ಹಣ ನೀಡಿ ರಶೀದಿ ಪಡೆದಿದ್ದಾರೆ.
‘ಗೃಹಲಕ್ಷ್ಮಿ ಯೋಜನೆ ಹಣವನ್ನು ಪ್ರತಿ ತಿಂಗಳು ಮೊದಲು ನಾಡದೇವಿ ಚಾಮುಂಡೇಶ್ವರಿಗೆ ಸಲ್ಲಿಸಿ ನಂತರ ಫಲಾನುಭವಿಗಳಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದೆ. ಸರ್ಕಾರದ ಖಾತೆ ಅಥವಾ ವೈಯಕ್ತಿಕ ಖಾತೆಯಿಂದ ಹಣ ನೀಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಸಚಿವೆ ಅವರು ವೈಯಕ್ತಿಕ ಖಾತೆಯಿಂದ ನನ್ನ ಖಾತೆಗೆ ಹಣ ಹಾಕಿದ್ದರು. ಅದನ್ನು ದೇವಿಗೆ ಸಲ್ಲಿಸಿದ್ದೇನೆ’ ಎಂದು ದಿನೇಶ್ ಗೂಳಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೇ 9ರಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಅವರೊಂದಿಗೆ ನಾನೂ ದೇವಿಯ ಸನ್ನಿಧಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದ್ದೆವು. ಅಧಿಕಾರಕ್ಕೆ ಬಂದಾಗ ಆ.9ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಮುಂಚೆ ದೇವಿಗೆ ಮೊದಲ ಹಣ ನೀಡಿದ್ದೆವು’ ಎಂದು ಸ್ಮರಿಸಿದರು.
‘ಪ್ರತಿ ತಿಂಗಳು ₹ 2 ಸಾವಿರ ನೀಡುವ ಬದಲು ಒಟ್ಟಿಗೆ 5 ವರ್ಷದ ಎಲ್ಲ ತಿಂಗಳ ಹಣವನ್ನು ಕಾಣಿಕೆಯಾಗಿ ಸಲ್ಲಿಸಲಾಗಿದೆ. ವಿರೋಧ ಪಕ್ಷಗಳು ಕಾಂಗ್ರೆಸ್ ಗ್ಯಾರಂಟಿ 6 ತಿಂಗಳು ಮಾತ್ರ ಇರುತ್ತದೆ ಎಂದು ಜನರಲ್ಲಿ ಸುಳ್ಳು ಹರಡುತ್ತಿದ್ದಾರೆ. ದೇವಿಗೆ ಗ್ಯಾರಂಟಿಯ ಹಣ ನೀಡುವ ಮೂಲಕ 2028ರವರೆಗೂ ಯೋಜನೆಯಿರಲಿದೆ. ನಂತರವೂ ಯೋಜನೆ ಮುಂದುವರಿಯಲಿದೆ ಎಂದು ದೇವಿಯ ಮುಂದೆ ನಾಡಿನ ಜನರಿಗೆ ನೀಡಿದ ವಾಗ್ದಾನವಾಗಿದೆ’ ಎಂದರು.
‘ರಾಜ್ಯದ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ಸರ್ಕಾರ ₹ 11,200 ಕೋಟಿ ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.