ADVERTISEMENT

ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಬೇಡ: ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 9:33 IST
Last Updated 26 ಮಾರ್ಚ್ 2022, 9:33 IST
ಶ್ರೀನಿವಾಸಪ್ರಸಾದ್
ಶ್ರೀನಿವಾಸಪ್ರಸಾದ್   

ಮೈಸೂರು: ‘ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿ ಉಂಟಾಗುವ ಸಾಧ್ಯತೆಯಿದ್ದು, ಈ ಯೋಜನೆಯನ್ನು ಕೈಬಿಡಬೇಕು’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ‘ಈ ಬಾರಿಯ ಬಜೆಟ್‌ನಲ್ಲಿ ರೋಪ್‌ವೇ ಯೋಜನೆಯನ್ನು ಘೋಷಿಸಲಾಗಿದೆ. ಪರಿಸರವಾದಿಗಳು ಅದನ್ನು ವಿರೋಧಿಸುವುದರಲ್ಲಿ ಅರ್ಥವಿದೆಯೆಂದು ಭಾವಿಸಿದ್ದೇನೆ. ಪರಿಸರಕ್ಕೆ ಅಪಾಯವಿರುವುದರಿಂದ ರೋಪ್ ವೇ ನಿರ್ಮಿಸುವ ನಿರ್ಧಾರ ಸೂಕ್ತವಲ್ಲ’ ಎಂದಿದ್ದಾರೆ.

‘ಬೆಟ್ಟದ ತುದಿ ತಲುಪಲು ಸುಸಜ್ಜಿತ ಮೆಟ್ಟಿಲುಗಳು ಇವೆ. ಬಸ್ಸು ಹಾಗೂ ಇತರೆ ವಾಹನಗಳಿಗೆ ರಸ್ತೆಯಿದೆ. ಇದಲ್ಲದೇ ಇನ್ನೂ ಎರಡು ಕಡೆಗಳಿಂದ ಬೆಟ್ಟ ಹತ್ತಲು ಮಾರ್ಗಗಳಿವೆ. ಕೇವಲ ಅರ್ಧಗಂಟೆಯಲ್ಲಿ ಬೆಟ್ಟದ ತುದಿ ತಲುಪಬಹುದು. ಬೆಟ್ಟವನ್ನೇರಲು ಮಾರ್ಗ ಇರುವುದರಿಂದ ರೋಪ್‌ವೇ ಅನಗತ್ಯ’ ಎಂದು ಹೇಳಿದ್ದಾರೆ.

ADVERTISEMENT

‘ರೋಪ್‌ವೇ ಮಾತ್ರವಲ್ಲದೆ, ಬೆಟ್ಟದ ಪರಿಸರದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸುವುದು ಪರಿಸರ ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವಲ್ಲ. ಭಕ್ತರಿಗೆ ಈಗ ಅಲ್ಲಿ ನೀಡಿರುವ ಮೂಲಸೌಕರ್ಯ ಸಾಕೆನಿಸುತ್ತದೆ. ಇನ್ನಷ್ಟು ಸೌಲಭ್ಯ ಅನಿವಾರ್ಯ ಎನಿಸಿದರೆ, ಪರಿಸರಸ್ನೇಹಿ ವಿಧಾನದಲ್ಲಿ ಒದಗಿಸಿ. ರೋಪ್‌ವೇ ನಿರ್ಮಾಣ ನಿರ್ಧಾರವನ್ನು ಮುಖ್ಯಮಂತ್ರಿ ಅವರು ಮರುಪರಿಶೀಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.