ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಹಾದಿಯಲ್ಲಿ ಮಳೆಗಾಲದಲ್ಲಿ ಕ್ರಮಿಸಿದರೆ ಝರಿಗಳ ಲೋಕ ಸೃಷ್ಟಿಯಾಗುತ್ತದೆ. ಇವುಗಳನ್ನು ಸೃಷ್ಟಿಸಿದ ತೊರೆಗಳು ಎಲ್ಲಿ ಹೋಗುತ್ತವೆ?
–ಇಂಥ ಪ್ರಶ್ನೆಯೊಂದು ಬೆಟ್ಟವನ್ನು ಬೆಟ್ಟದಷ್ಟು ಆರಾಧಿಸುವ ಭಕ್ತರಿಗೆ, ಮೈಸೂರಿಗರಿಗೆ ಕಾಡಿದ್ದರೆ ಬಹುತೇಕ ಚಾಮುಂಡಿ ಬೆಟ್ಟವು ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿ ಬಿಡುತ್ತಿತ್ತು.
ಓಡುವ ತೊರೆಗಳನು ಹಿಡಿಯಲು ಹಂತ ಹಂತವಾಗಿ ತಪ್ಪಲಿನುದ್ದಕ್ಕೂ ಕೆರೆ– ಕಟ್ಟೆಗಳನ್ನು ಕಟ್ಟಲಾಗಿದೆ. ಅವು ಬೆಟ್ಟದ ಹಸಿರ ಹಾಸಿನಲ್ಲಿಟ್ಟ ನೀಲಿ ಒಡವೆಗಳಂತೆ ಬೆಟ್ಟದ ತುದಿಯಿಂದ ಕಾಣುತ್ತವೆ. ಆದರೀಗ, ಅವುಗಳು ಅವಸಾನದ ಅಂಚಿನಲ್ಲಿವೆ. ಕೆಲವಂತೂ ಅಳಿದೇ ಹೋಗಿವೆ.
7 ದಶಕಗಳ ಹಿಂದೆ ಇದ್ದ ಅರಮನೆ ಮುಂದಿನ ದೊಡ್ಡಕೆರೆಯಲ್ಲಿ ಬೆಟ್ಟದ ಬಿಂಬ ಕಾಣುತ್ತಿತ್ತು. ಅದನ್ನು ನಾವೀಗ ಕಳೆದು ಹೋದ ಕನಸಂತೆ ಹಳೆಯ ಪಟಗಳಲ್ಲಿ ನೋಡಬೇಕಷ್ಟೇ. ಅದೇ ದುಸ್ಥಿತಿಯು ತಪ್ಪಲಿನ ಜಲಕಣ್ಣುಗಳಿಗೂ ಬರಲಿದ್ದು, ಕರುಣೆಯ ಕಣ್ಣುಗಳನ್ನು ಆಡಳಿತ ವ್ಯವಸ್ಥೆ, ನಾಗರಿಕರು ಬೀರಬೇಕಿದೆ.
ದಶಕಗಳ ಹಿಂದೆಯಷ್ಟೇ ನೀರು ತುಂಬಿಕೊಂಡಿದ್ದ ಕೆರೆಗಳನ್ನು ಬೆಟ್ಟದ ಹಾದಿಯಲ್ಲಿ ನೋಡಿದವರಿಗೆ ಈಗ ಕನಸಿನಂತಾಗಿವೆ. ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆ ಹಾಗೂ ಅದರ ಸುತ್ತಮುತ್ತಲೂ ಹೊಸ ಕಟ್ಟಡಗಳು ಏಳುತ್ತಲೇ ಇವೆ. ಬಂಡಿಪಾಳ್ಯದ ಮೈಸೂರು– ಹದಿನಾರು ರಸ್ತೆ ಹಾಗೂ ರಿಂಗ್ ರಸ್ತೆಯ ಮಧ್ಯಭಾಗವು ಕಟ್ಟಡ– ಪ್ಲಾಸ್ಟಿಕ್ ತ್ಯಾಜ್ಯ ಸುರಿಯುವ ತಾಣವಾಗಿದೆ.
‘ಎಪಿಎಂಸಿ ಮಾರುಕಟ್ಟೆ ಹಾಗೂ ಏಳಿಗೆಹುಂಡಿ, ಹೊಸಹುಂಡಿ, ಬಂಡೀಪಾಳ್ಯ ಸೇರಿದಂತೆ ಗ್ರಾಮಗಳ ಹೋಟೆಲ್‌ನವರೂ, ತ್ಯಾಜ್ಯ ಸುರಿಯುವ ತಾಣವಾಗಿ ಇಲ್ಲಿನ ಕೆರೆಕಟ್ಟೆಗಳನ್ನು ಬದಲಾಯಿಸಿಕೊಂಡಿದ್ದಾರೆ. ‘ಪರಸಯ್ಯನ ಕೆರೆ’, ‘ಉತ್ತನಹಳ್ಳಿ ಕೆರೆ’ ಪುನರುಜ್ಜೀವನಗೊಂಡಿದ್ದರೆ, ಉಳಿದವು ವಿನಾಶದತ್ತ ನಡೆದಿವೆ’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಶೈಲಜೇಶ.
‘ಬೆಟ್ಟದ ದಕ್ಷಿಣ ಭಾಗದಲ್ಲಿನ ತೊರೆಗಳ ವೈಭವವು ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಎಡೆ ಬಿಡದೆ ಮಳೆ ಸುರಿದರೆ ಝರಿಗಳು ಮೈಸೂರಿಗರನ್ನು ಕೈ ಬೀಸಿ ಕರೆಯುತ್ತವೆ. ಮೀಸಲು ಅರಣ್ಯ ಪ್ರದೇಶವಾದ ಚಾಮುಂಡಿ ಬೆಟ್ಟದ ಬಫರ್ ವಲಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ತೊರೆಗಳು ತಮ್ಮ ಹಾದಿಯನ್ನು ಬದಲಿಸುತ್ತಿವೆ. ಹೀಗಾಗಿಯೇ ಲಲಿತಾದ್ರಿಪುರದ ಕಟ್ಟೆಗಳು ಮಳೆಗಾಲದಲ್ಲೂ ತುಂಬುತ್ತಿಲ್ಲ’ ಎಂದು ಹೇಳಿದರು.
ತಪ್ಪಲಿನುದ್ದಕ್ಕೂ ರಿಯಲ್ ಎಸ್ಟೇಟ್ ಡೆವಲಪರ್‌ಗಳು ತೊರೆ ಹಾದಿಯನ್ನೂ ಒಳಗೊಂಡಂತೆ ಬಡಾವಣೆ ಮಾಡಿರುವುದು ಕಣ್ಣ ಮುಂದಿದೆ. ಕಂದಾಯ ಇಲಾಖೆಯು ಒತ್ತುವರಿ ತೆರವು ಮಾಡಬೇಕು. ಚಾಮುಂಡಿ ಬೆಟ್ಟದ ಹಸಿರು– ನೀಲಿ ವಲಯವನ್ನು ಕಾಪಾಡಬೇಕು. ಪರಿಸರ ಕೇಂದ್ರಿತ ಅಭಿವೃದ್ಧಿಗೆ ಮುಂದಾಗಬೇಕು ಎಂಬುದು ಪರಿಸರಪ್ರಿಯರ ಒತ್ತಾಯ.
‘ಉಕ್ಕುವ ಏಳಿಗೆಹುಂಡಿ ಕೊಳ’
ಚಾಮುಂಡಿ ಬೆಟ್ಟವು ಮೈಸೂರು ನಗರದ ಅಂತರ್ಜಲ ಹೆಚ್ಚಿಸುವಲ್ಲಿ ಎಷ್ಟು ನಿರ್ಣಾಯಕ ಎಂಬುದನ್ನು ಹೊಸಹುಂಡಿ ಗ್ರಾಮ ವ್ಯಾಪ್ತಿಯಲ್ಲಿರುವ ಗೋಮಾಳದ ಜಾಗದಲ್ಲಿರುವ ಏಳಿಗೆಹುಂಡಿ ಕೊಳವೇ ಹೇಳುತ್ತದೆ. ಇಲ್ಲಿ ಬೇಸಿಗೆಯಲ್ಲೂ ನೀರು ಬತ್ತುವುದಿಲ್ಲ. ಕಲ್ಲಿನ ಕೋರೆಯಾಗಿದ್ದ ಇದರಲ್ಲಿನ ಶಿಲಾಪದರಗಳಲ್ಲಿ ನೀರು ಜಿಗುತ್ತಿರುತ್ತದೆ. ಹೊಸಹುಂಡಿ ಗ್ರಾಮದ ಸರ್ವೆ ಸಂಖ್ಯೆ 89ರಲ್ಲಿನ 3.17 ಎಕರೆ ಗೋಮಾಳದಲ್ಲಿ ಏಳಿಗೆಹುಂಡಿ ಕೊಳವೂ ಇದೆ. ಇದನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ ಎಂದು ‘ದಿಶಾಂಕ್’ ಆ್ಯಪ್‌ನಲ್ಲಿ ಹೇಳಲಾಗುತ್ತದೆ. ಕೊಳವು ತುಂಬಿ ಹರಿಯುವ ಜಾಗವು ನೀಲಿ ಬಣ್ಣದಲ್ಲಿ ಕಾಣುತ್ತದೆ. ಇಂಥ ನೀಲಿ ಬಣ್ಣ ತೊರೆಗಳು ತಪ್ಪಲಿನುದ್ದಕ್ಕೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.