ADVERTISEMENT

Fire at Chamundi Hills | ಬೆಂಕಿ ರೇಖೆ ನಿರ್ವಹಿಸಿಲ್ಲ: ಆರೋಪ

ಗಸ್ತು ಸಿಬ್ಬಂದಿ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 5:51 IST
Last Updated 23 ಫೆಬ್ರುವರಿ 2025, 5:51 IST
ಚಾಮುಂಡಿ ಬೆಟ್ಟದ ಅರಣ್ಯಕ್ಕೆ ಶುಕ್ರವಾರ ಬೆಂಕಿ ಬಿದ್ದು ಹಾನಿಗೊಳಗಾದ ಪ್ರದೇಶ – ಪ್ರಜಾವಾಣಿ ಚಿತ್ರ‌: ಹಂಪಾ ನಾಗರಾಜ್‌
ಚಾಮುಂಡಿ ಬೆಟ್ಟದ ಅರಣ್ಯಕ್ಕೆ ಶುಕ್ರವಾರ ಬೆಂಕಿ ಬಿದ್ದು ಹಾನಿಗೊಳಗಾದ ಪ್ರದೇಶ – ಪ್ರಜಾವಾಣಿ ಚಿತ್ರ‌: ಹಂಪಾ ನಾಗರಾಜ್‌   

ಮೈಸೂರು: ಚಾಮುಂಡಿ ಬೆಟ್ಟಕ್ಕೆ 15 ವರ್ಷಗಳ ಬಳಿಕ ದೊಡ್ಡ ‍ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ಅರಣ್ಯ ಪ್ರದೇಶ ಸುಟ್ಟಿದೆ. ಬೆಂಕಿ ರೇಖೆ ನಿರ್ವಹಣೆ ಮಾಡದಿರುವುದೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ದೂರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.

ಉತ್ತನಹಳ್ಳಿ ಹಾಗೂ ಲಲಿತಾದ್ರಿಪುರ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯು ಜನರಲ್ಲಿ ಆತಂಕ ಮೂಡಿಸಿತ್ತು. ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಾಚುತ್ತಾ ರಸ್ತೆಗಳನ್ನೂ ದಾಟಿ ಶರವೇಗದಲ್ಲಿ ಮುಂದುವರಿಯಿತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಡರಾತ್ರಿಯವರೆಗೂ ಹರಸಾಹಸ ಪಟ್ಟರು. 11 ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಲಾಯಿತು. ಉತ್ತನಹಳ್ಳಿಗೆ ತೆರಳುವ ರಸ್ತೆಯನ್ನು ಸಂಜೆಯವರೆಗೂ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸಂಜೆ ಬೆಂಕಿಯು ಮತ್ತಷ್ಟು ವ್ಯಾಪಿಸಿದಾಗ ತಾವರೆಕೆರೆಯಲ್ಲೂ ಸಂಚಾರ ನಿರ್ಬಂಧಿಸಲಾಯಿತು.

2019– 20ರಲ್ಲಿ ಬೆಂಕಿ ಕಾಣಿಸಿಕೊಂಡು 70 ಎಕರೆ ಅರಣ್ಯ ಪ್ರದೇಶ ಸುಟ್ಟ ಹೋಗಿತ್ತು. ಆ ನಂತರ ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಹೀಗಾಗಿ ಬೆಂಕಿ ಬೇಗನೆ ತಗುಲಬಹುದಾದ ಒಣಹುಲ್ಲು, ಕಳೆ ಹೆಚ್ಚಾಗಿತ್ತು. ತಪ್ಪಲಿನಲ್ಲಿ ಕಾಣಿಸಿಕೊಂಡ ಬೆಂಕಿ ವೇಗವಾಗಿ ಬೆಟ್ಟದ ಪೂರ್ತಿ ಆವರಿಸಿತು ಎನ್ನಲಾಗಿದೆ.

ADVERTISEMENT

‘ದನ ಮೇಯಿಸುವವರು ಬೆಟ್ಟದಲ್ಲಿ ಹೊಸ ಹುಲ್ಲು ಬೆಳೆಯುವ ಕಾರಣಕ್ಕಾಗಿ ಬೆಂಕಿ ಹಚ್ಚಿರಬಹುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಬೆಂಕಿ ಹಚ್ಚಿದವರು ಯಾರು ಎಂಬ ಬಗ್ಗೆ ಅವರಲ್ಲೂ ಸ್ಪಷ್ಟತೆಯಿಲ್ಲ.

‘ಬೆಟ್ಟದಲ್ಲಿನ ಕಾವಲುಗಾರರ ಸಂಖ್ಯೆ ಕಡಿಮೆ ಇದ್ದ ಕಾರಣ ಈ ರೀತಿಯ ಕೃತ್ಯ ಎಸಗುವವರನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ. ಗಾಂಜಾ ವ್ಯಸನಿಗಳೂ ಬೆಟ್ಟಕ್ಕೆ ತೆರಳಿ ಮೋಜು– ಮಸ್ತಿ ನಡೆಸುತ್ತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದರು.

‘ಬೆಂಕಿ ರೇಖೆ ನಿರ್ವಹಣೆ ಮಾಡದ ಕಾರಣ ದೊಡ್ಡ ಪ್ರಮಾಣದಲ್ಲಿ ಅರಣ್ಯ ಅಗ್ನಿಗೆ ಆಹುತಿಯಾಗಿದೆ’ ಎಂಬ ಸ್ಥಳೀಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪ ಅರಣ್ಯಾಧಿಕಾರಿ ಬಸವರಾಜ್‌, ‘ಪ್ರತೀ ವರ್ಷದಂತೆ ಈ ಬಾರಿಯೂ 65 ಕಿ.ಮೀ ಬೆಂಕಿ ರೇಖೆ ನಿರ್ವಹಣೆ ಮಾಡಿದ್ದು, ಈ ಬಾರಿ 5 ಕಿ.ಮೀ ಹೊಸ ಬೆಂಕಿ ರೇಖೆ ನಿರ್ಮಾಣ ಮಾಡಿದ್ದೇವೆ. ಮೂವರು ಬೆಂಕಿ ಕಾವಲುಗಾರರು ಹಾಗೂ ವೀಕ್ಷಣಾ ಗೋಪುರ, 1 ಟ್ಯಾಂಕರ್‌ ವಾಹನದ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ಬೆಂಕಿಯ ಜ್ವಾಲೆಗೆ ಮೈಯೊಡ್ಡಿ ಸುಟ್ಟ ಮರಗಳು
‘ಬೆಟ್ಟಕ್ಕೆ ಹೆಚ್ಚಿನ ಕಾವಲುಗಾರರನ್ನು ಒದಗಿಸುವಂತೆ ಹಾಗೂ ಸಂಜೆ 6ರ ನಂತರ ಬೆಟ್ಟಕ್ಕೆ ತೆರಳುವ ರಸ್ತೆ ಬಂದ್‌ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು’
ಬಸವರಾಜ್‌ ಉಪ ಅರಣ್ಯಾಧಿಕಾರಿ

‘ಬೆಂಕಿ ಹಾಕಿದವರ ಪತ್ತೆಗೆ ಕ್ರಮ’

ಮೈಸೂರು: ‘ದನ ಮೇಯಿಸುವವರು ಹೊಸ ಹುಲ್ಲು ಬೆಳೆಯಲು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಹಾಕಿರುವ ಬಗ್ಗೆ ಸಂಶಯಗಳಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ’ ಎಂದು ಉಪ ಅರಣ್ಯಾಧಿಕಾರಿ ಬಸವರಾಜ್‌ ತಿಳಿಸಿದರು. ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮಧ್ಯಾಹ್ನ ಗೊಲ್ಲಹಳ್ಳ ಗೆಟ್ಲೆ ಹಳ್ಳದಲ್ಲಿ ಕಾಣಿಸಿಕೊಂಡ ಬೆಂಕಿಯು ಬೆಟ್ಟದಲ್ಲಿ ಹರಡಿದ್ದು ರಾತ್ರಿ 11.30ಕ್ಕೆ ನಂದಿಸಲಾಯಿತು. ರಾತ್ರಿಯಿಡೀ ಪರಿಶೀಲನೆ ನಡೆಸಲಾಗಿದೆ. ಡ್ರೋಣ್‌ ಮೂಲಕ ಹಾಗೂ ಸಿಬ್ಬಂದಿ ಕಳುಹಿಸಿ ಬೆಂಕಿ ಕಿಡಿ ಇದೆಯೇ ಎಂದು ಪರಿಶೀಲಿಸಲಾಗಿದೆ’ ಎಂದರು. ‘2008ರ ನಂತರ ಬೆಂಕಿ ಬಿದ್ದಿರುವ ಪ್ರಕರಣ ನಡೆಯದಿದ್ದರಿಂದ ಒಣಗಿದ ಹುಲ್ಲು ಹೆಚ್ಚಿತ್ತು. ಗೊಲ್ಲ ಹಳ್ಳ ಹಾಗೂ ದೇವಿಕೆರೆ ಭಾಗದಲ್ಲಿ 35 ಎಕರೆ ಅರಣ್ಯ ಪ್ರದೇಶ ಸುಟ್ಟಿದೆ. ಒಣಗಿದ ಎರಡು ನೀಲಗಿರಿ ಮರ ಸುಟ್ಟಿದ್ದು ಯಾವುದೇ ಪ್ರಾಣಿಗಳ ಕಳೇಬರ ಪತ್ತೆಯಾಗಿಲ್ಲ. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕರು ಜಾಗರೂಕರಾಗಿರಬೇಕು. ಮೋಜು ಮಸ್ತಿ ಮಾಡಿ ಕಾಡಿಗೆ ಹಾನಿ ಮಾಡಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.