ADVERTISEMENT

ಚಾಮುಂಡಿ ಬೆಟ್ಟದಲ್ಲಿ ಪಾಲನೆಯಾಗದ ಆದೇಶ | ನಿಷೇಧದ ನಡುವೆಯೂ ‘ದರ್ಶನ’

ಕಡತಕ್ಕೆ ಸೀಮಿತಗೊಂಡ ಜಿಲ್ಲಾಡಳಿತದ ಆದೇಶ; ಪ್ರಭಾವಿಗಳಿಗೆ ಪ್ರವೇಶ

ಡಿ.ಬಿ, ನಾಗರಾಜ
Published 10 ಜುಲೈ 2020, 16:14 IST
Last Updated 10 ಜುಲೈ 2020, 16:14 IST
ಚಾಮುಂಡೇಶ್ವರಿ ದೇಗುಲದ ಆಂಜನೇಯನಿಗೆ ಶುಕ್ರವಾರ ಪೂಜೆ ಸಲ್ಲಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪಸಿಂಹ
ಚಾಮುಂಡೇಶ್ವರಿ ದೇಗುಲದ ಆಂಜನೇಯನಿಗೆ ಶುಕ್ರವಾರ ಪೂಜೆ ಸಲ್ಲಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪಸಿಂಹ   

ಮೈಸೂರು: ಜಾಗತಿಕವಾಗಿ ಮನುಷ್ಯ ಕುಲಕ್ಕೆ ಕಂಟಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿ ಮೈಸೂರು ಜಿಲ್ಲಾಡಳಿತ ಹೊರಡಿಸಿದ್ದ ಕಟ್ಟುನಿಟ್ಟಿನ ಆದೇಶ, ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಪಾಲನೆಯಾಗದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಆಷಾಢ ಮಾಸ ಆರಂಭಕ್ಕೂ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಸಿದ್ದ ಜಿಲ್ಲಾಡಳಿತ, ಅಪಾರ ಭಕ್ತ ಸಮೂಹದ ಧಾರ್ಮಿಕ ಭಾವನೆಗೆ ನೋವುಂಟಾದರೂ ಸಹ, ಈ ಬಾರಿ ಮಹಾಮಾರಿ ವೈರಸ್ ಹರಡುವಿಕೆ ತಡೆಗಟ್ಟಲಿಕ್ಕಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು.

ಅದರಂತೆ ಆಷಾಢ ಮಾಸದ ಮಂಗಳವಾರ, ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿಯಂದು ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿತ್ತು. ತಲೆತಲಾಂತರದಿಂದ ದೇವಿಯ ದರ್ಶನಾಶೀರ್ವಾದ ಪಡೆಯುತ್ತಿದ್ದ ಭಕ್ತ ಸಮೂಹವೂ ಸಹ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿತ್ತು.

ADVERTISEMENT

ಆದರೆ ಆಷಾಢ ಮಾಸದ ಮೂರನೇ ಶುಕ್ರವಾರದಂದು ಪಂಚಾಯತ್‌ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪಸಿಂಹ, ಚಲನಚಿತ್ರ ನಟ ದರ್ಶನ್‌, ಮೈಸೂರು ಮಹಾನಗರ ಪಾಲಿಕೆಯ ಉಪ ಮೇಯರ್ ಸಿ.ಶ್ರೀಧರ್ ಸೇರಿದಂತೆ ಇನ್ನೂ ಕೆಲ ಪ್ರಮುಖರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನಾಶೀರ್ವಾದ ಪಡೆದಿರುವುದಕ್ಕೆ ಸಾರ್ವಜನಿಕರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಯ ಆಕ್ರೋಶ ವ್ಯಕ್ತವಾಗಿದೆ.

ನೈತಿಕ ಹೊಣೆ ಹೊರುವವರಾರು..?

‘ಸುದ್ದಿಯಾಗದ ಸುದ್ದಿಯಿದು... ಶುಕ್ರವಾರ ಬೆಳಿಗ್ಗೆ 7.45ರ ಸಮಯದಲ್ಲಿ ಚಾಮುಂಡಿ ಬೆಟ್ಟದಲ್ಲಿ ಕಂಡು ಬಂದ ದೃಶ್ಯ. ಕೆ.ಎಸ್.ಈಶ್ವರಪ್ಪನವರು ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಮಾಧ್ಯಮದ ಮಿತ್ರರು ಈಶ್ವರಪ್ಪನವರನ್ನು ಮುತ್ತಿಕೊಂಡ ದೃಶ್ಯ.

ಸಚಿವರು, ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಮಾಧ್ಯಮದ ಮಿತ್ರರೇ ಕನಿಷ್ಠ ಅಂತರವನ್ನು ಕಾಪಾಡದೇ ಬೇಜವಾಬ್ದಾರಿ ತೋರಿದರೆ ಜನ ಸಾಮಾನ್ಯರಿಗೆ ಬುದ್ದಿ ಹೇಳುವ ನೈತಿಕ ಹೊಣೆಯನ್ನು ಹೊರುವವರಾರು..?’

ಹಿರಿಯ ವಕೀಲ ಪಿ.ಜೆ.ರಾಘವೇಂದ್ರ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಜನಜಂಗುಳಿಯಿರುವ ಮೂರು ಛಾಯಾಚಿತ್ರಗಳೊಂದಿಗೆ ಅಪ್‌ಲೋಡ್‌ ಮಾಡಿರುವ ಸಂದೇಶವಿದು. ಇದನ್ನು ಸಂಜೆ ವೇಳೆಗೆ 22 ಜನರು ಹಂಚಿಕೊಂಡಿದ್ದರೆ, 35 ಮಂದಿ ಪ್ರತಿಕ್ರಿಯಿಸಿದ್ದು, 111ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಲೇವಡಿ

‘ತಾಯಿ ಚಾಮುಂಡೇಶ್ವರಿ ಮುಂದಿನ ಜನ್ಮದಲ್ಲಿ ನನ್ನನ್ನು ಸೆಲೆಬ್ರಿಟಿಯಾಗಿ ಮಾಡು.

ಕೊರೊನಾದಿಂದ ಈ ಬಾರಿ ಆಷಾಢ ಮಾಸದಲ್ಲಿ ಅದಿದೇವತೆ ಚಾಮುಂಡೇಶ್ವರಿ ದರ್ಶನ ಯಾರಿಗೂ ಇಲ್ಲ ಎಂದಿದ್ದ ಮುಜರಾಯಿ ಇಲಾಖೆ.

ಈಗ ರಾಜಕಾರಣಿಗಳಿಗೆ ಹಾಗೂ ಚಲನಚಿತ್ರ ನಟರಿಗೆ ಅವರ ಬೆಂಬಲಿಗರಿಗೆ ಮತ್ತು ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಮಾತ್ರ ದರ್ಶನ ಭಾಗ್ಯ. ಒಬ್ಬರಿಗೆ ಒಂದು ನ್ಯಾಯ. ಇನ್ನೊಬ್ಬರಿಗೆ ಕನಿಷ್ಠ ಅಂತರವೇ ಮಾಯ...’

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಲೇವಡಿ ಮಾಡಿರುವ ಪೋಸ್ಟಿದು. ಇದನ್ನು ಸಂಜೆ ವೇಳೆಗೆ ಐವರು ಹಂಚಿಕೊಂಡಿದ್ದರೆ, 10 ಜನರು ಪ್ರತಿಕ್ರಿಯಿಸಿದ್ದು, 63ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.