ADVERTISEMENT

ಮೈಸೂರು: ಬೆಟ್ಟ ಕುಸಿತ; ಜಿಯೋ ಟ್ರೆಲ್ ತಂತ್ರಜ್ಞಾನದ ಬಳಕೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 6:20 IST
Last Updated 14 ನವೆಂಬರ್ 2021, 6:20 IST
ಚಾಮುಂಡಿಬೆಟ್ಟದ ರಸ್ತೆ ಕುಸಿತವನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಶನಿವಾರ ಪರಿಶೀಲಿಸಿದರು. ಶಾಸಕ ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸಂಸದ ಪ್ರತಾಪಸಿಂಹ ಇದ್ದಾರೆ
ಚಾಮುಂಡಿಬೆಟ್ಟದ ರಸ್ತೆ ಕುಸಿತವನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಶನಿವಾರ ಪರಿಶೀಲಿಸಿದರು. ಶಾಸಕ ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸಂಸದ ಪ್ರತಾಪಸಿಂಹ ಇದ್ದಾರೆ   

ಮೈಸೂರು: ‘ಚಾಮುಂಡಿ ಬೆಟ್ಟದ ಕುಸಿದಿರುವ ರಸ್ತೆಯನ್ನು ಜಿಯೋ ಟ್ರೆಲ್ ತಂತ್ರಜ್ಞಾನದ ಮೂಲಕ ದುರಸ್ತಿ ನಡೆಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಕುಸಿದಿರುವ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮಣ್ಣಿನ ಹೀರಿಕೊಳ್ಳುವ ಸಾಮರ್ಥ್ಯ ಮೀರಿ ತೇವಾಂಶ ಹೆಚ್ಚಾಗಿದ್ದರಿಂದ ರಸ್ತೆ ಕುಸಿದಿದೆ. ತಜ್ಞರ ಸಲಹೆಯಂತೆ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಮಾಡಲಾಗುವುದು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗದು’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ಹೇಳಿದರು.

‘ಎಲ್ಲೆಲ್ಲಿ ರಸ್ತೆ ಕುಸಿಯಬಹುದು ಎಂಬ ಕುರಿತು ಸಮೀಕ್ಷೆ ನಡೆಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ಇಲ್ಲಿನ ಕೆ.ಆರ್.ಮಿಲ್- ಕೆಸರೆ ಬಳಿಯ ಸೇತುವೆ ಕೂಡ ಕುಸಿದಿದೆ. ಅದನ್ನೂ ಕೂಡ ಸದ್ಯದಲ್ಲಿಯೇ ದುರಸ್ತಿಪಡಿಸುವುದಾಗಿ ಅವರು ಹೇಳಿದರು.

‘ಬಿಟ್‌ಕಾಯಿನ್ ಹಗರಣದಲ್ಲಿ ಆರೋಪಿಯನ್ನು ಬಂಧಿಸಿದ್ದೇ ಬಿಜೆಪಿ ಸರ್ಕಾರ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ. ಕಾಂಗ್ರೆಸ್‌ನವರು ಹುಸಿ ಆರೋಪಗಳನ್ನು ಮಾಡಬಾರದು’ ಎಂದರು.

ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಇದ್ದರು.

ಏನಿದು ಜಿಯೋ ಟ್ರೆಲ್ ತಂತ್ರಜ್ಞಾನ?
ಭಾರತೀಯ ವಿಜ್ಞಾನ ಸಂಸ್ಥೆ ರೂಪಿಸಿರುವ ಜಿಯೋ ಟ್ರೆಲ್ ತಂತ್ರಜ್ಞಾನವು ಪರಿಸರಸ್ನೇಹಿ ಎನಿಸಿದೆ. ಕಾಂಕ್ರೀಟ್‌ನ್ನು ಬಳಸದೇ ಸ್ಥಳದಲ್ಲೇ ಲಭ್ಯವಿರುವ ಮಣ್ಣು, ಜಲ್ಲಿಕಲ್ಲುಗಳನ್ನು ಬಳಸಿ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಈಗಾಗಲೇ ಮಡಿಕೇರಿ ಹಾಗೂ ಕೆಲವೆಡೆ ಇಂತಹ ಕಾಮಗಾರಿಗಳು ನಡೆಯುತ್ತಿದ್ದು, ಸದ್ಯ ಮೈಸೂರಿನಲ್ಲೂ ಇದೇ ತಂತ್ರಜ್ಞಾನದ ನೆರವು ಪಡೆಯಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.