ADVERTISEMENT

ದಸರಾ ನಗರಿ ಸಾಲದು ತಯಾರಿ | ಸಬರ್ಬ್‌ ನಿಲ್ದಾಣದ ಎದುರೇ ಅವ್ಯವಸ್ಥೆ!

ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ

ಎಂ.ಮಹೇಶ
Published 21 ಸೆಪ್ಟೆಂಬರ್ 2024, 6:05 IST
Last Updated 21 ಸೆಪ್ಟೆಂಬರ್ 2024, 6:05 IST
ಮೈಸೂರಿನ ಸಬರ್ಬ್‌ ಬಸ್‌ ನಿಲ್ದಾಣದ ಎದುರಿನ ಬೆಂಗಳೂರು– ನೀಲಗಿರಿ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಸಬರ್ಬ್‌ ಬಸ್‌ ನಿಲ್ದಾಣದ ಎದುರಿನ ಬೆಂಗಳೂರು– ನೀಲಗಿರಿ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದೆ –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ನಗರದ ಹೃದಯ ಭಾಗವಾದ ಕೇಂದ್ರ ಬಸ್‌ ನಿಲ್ದಾಣದ (ಕೆಎಸ್‌ಆರ್‌ಟಿಸಿ, ಸಬರ್ಬ್‌) ಎದುರಿನಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ.

ಬೆಂಗಳೂರು–ಊಟಿ ಹೆದ್ದಾರಿ ಸಂಪರ್ಕಿಸುವ ಈ ರಸ್ತೆ ತೀವ್ರ ಹಾಳಾಗಿರುವುದರಿಂದ ಸಾರ್ವಜನಿಕರು, ಪ್ರಯಾಣಿಕರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಈ ರಸ್ತೆಯಲ್ಲಿನ ಸಮಸ್ಯೆಯನ್ನು ಬಹಳ ತಿಂಗಳಿಂದಲೂ ಪರಿಹರಿಸಿಲ್ಲ. ದಸರಾ ಸಮೀಪಿಸುತ್ತಿದ್ದಂತೆಯೇ ತರಾತುರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಈ ಕಾಮಗಾರಿ ನಾಡಹಬ್ಬದ ವೇಳೆಗೂ ಸಮರ್ಪಕವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿರುವುದನ್ನು ಅಲ್ಲಿನ ‘ಚಿತ್ರಣ’ವೇ ಸಾರಿ ಹೇಳುತ್ತಿದೆ.

ADVERTISEMENT

ಜಿಲ್ಲೆಯ ವಿವಿಧ ಭಾಗಗಳು, ರಾಜ್ಯದ ಪ್ರಮುಖ ನಗರಗಳು, ತಮಿಳುನಾಡು, ಕೇರಳದಂತಹ ಹೊರರಾಜ್ಯಗಳಿಗೂ ಬಸ್‌ಗಳ ಕಾರ್ಯಾಚರಣೆ ನಡೆಯುವ ಪ್ರಮುಖ ನಿಲ್ದಾಣವಿದು. ಇದರ ಎದುರಿನ ರಸ್ತೆಯೇ ಸುಸ್ಥಿತಿಯಲ್ಲಿಲ್ಲ.

ವಾಹನ ದಟ್ಟಣೆಯಿಂದ ಹೈರಾಣ:

‘ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದರು’ ಎಂಬಂತೆ ಕೊನೆ ಕ್ಷಣದಲ್ಲಿ ದುರಸ್ತಿ ಕೈಗೆತ್ತಿಕೊಂಡಿರುವುದರಿಂದ ಅಲ್ಲಿ ಈಗ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇನ್ನೊಂದು ಬದಿಯಲ್ಲಷ್ಟೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಸದ್ಯ ಏಕಮುಖ ಸಂಚಾರಕ್ಕಷ್ಟೆ ಅನುವು ಮಾಡಿಕೊಟ್ಟಿರುವುದರಿಂದ, ನೀಲಗಿರಿ ರಸ್ತೆ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳಿಗಷ್ಟೆ ಅವಕಾಶವಿದೆ. ಈ ರಸ್ತೆ ಬಹಳಷ್ಟು ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ (ಟ್ರಾಫಿಕ್ ಜಾಮ್‌) ಉಂಟಾಗುತ್ತಿದೆ.

ನಗರದ ಸಬರ್ಬ್‌ ಬಸ್‌ ನಿಲ್ದಾಣದ ಎದುರು ₹1 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆ.25ರೊಳಗೆ ಪೂರ್ಣಗೊಳಿಸಲಾಗುವುದು.
ವಸಂತ್, ಎಇಇ, ಲೋಕೋಪಯೋಗಿ ಇಲಾಖೆ

ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಅಲ್ಲಿ ಉಂಟಾಗುತ್ತಿದೆ. ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ವಾಹನ ದಟ್ಟಣೆ ನಿರ್ವಹಣೆಗೆ ಪೊಲೀಸರು ನಿತ್ಯವೂ ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಏಕಮುಖ ಸಂಚಾರದಿಂದಾಗಿ ಸಾರ್ವಜನಿಕರಿಗೂ ತೀವ್ರ ತೊಂದರೆ ಆಗುತ್ತಿದೆ.

ಈ ರಸ್ತೆಯಲ್ಲಿ ಮಧ್ಯದ ಮಾರ್ಗದಲ್ಲಷ್ಟೆ ಕಾಮಗಾರಿ ನಡೆಯುತ್ತಿದೆ. ಪಕ್ಕದಲ್ಲಿ ವಿಭಜಕದ ಕೆಲಸ ನಡೆಯುತ್ತಿದೆ. ಅದೂ ಆಮೆವೇಗದಲ್ಲಿದೆ. ಕಾಂಕ್ರಿಟ್‌ ಗೋಡೆ ನಿರ್ಮಾಣಕ್ಕಾಗಿ ಹಾಕಿರುವ ಕಬ್ಬಿಣದ ಸರಳುಗಳು, ಸಮೀಪದಲ್ಲಿರುವ ಗುಂಡಿಗಳು ಅಪಘಾತ–ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಲೋಕೋಪಯೋಗಿ ಇಲಾಖೆಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪರಿಶೀಲನೆ ನಡೆಸಿ ಕಾಮಗಾರಿ ಚುರುಕುಗೊಳಿಸುವ ಕೆಲಸವನ್ನು ಹಿರಿಯ ಅಧಿಕಾರಿಗಳಾಗಲಿ, ಜನಪ್ರನಿಧಿಗಳಾಗಲಿ ಮಾಡಿಲ್ಲ.

‘ಸಬರ್ಬ್‌ ಬಸ್‌ ನಿಲ್ದಾಣದ ಎದುರಿನ ರಸ್ತೆಯಲ್ಲಿ ನಿತ್ಯವೂ ಟ್ರಾಫಿಕ್‌ ಜಾಮ್ ಉಂಟಾಗಿ ಬಹಳ ತೊಂದರೆ ಆಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ, ದಸರಾ ಸಂದರ್ಭದಲ್ಲಿ ಬಹಳಷ್ಟು ವಾಹನಗಳು ಬರುವುದರಿಂದ ಇನ್ನೂ ಜಾಸ್ತಿ ತೊಂದರೆಯಾಗಲಿದೆ’ ಎಂದು ಆ ಮಾರ್ಗದಲ್ಲಿ ನಿತ್ಯವೂ ಸಂಚರಿಸುವ ಹಾಗೂ ಬಸ್‌ ನಿಲ್ದಾಣದ ಬಳಕೆದಾರರೂ ಆಗಿರುವ ಸಂತೋಷ್‌ಕುಮಾರ್‌ ಹೇಳಿದರು.

ಸಬರ್ಬ್‌ ಬಸ್‌ ನಿಲ್ದಾಣದ ಕಡೆಯಿಂದ ಇರ್ವಿನ್‌ ರಸ್ತೆಗೆ ತೆರಳುವ ಅಲ್ಲಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಇನ್ನೂ ನಡೆದಿಲ್ಲ. ಅಲ್ಲದೇ, ಸಮೀಪದ ನೀಲಗಿರಿ ರಸ್ತೆಯ ಬದಿಯೂ ಹಾಳಾಗಿದೆ.

‘ತರಾತುರಿಯಲ್ಲಿ ಕೆಲಸ’

‘ನಾಡಹಬ್ಬ ದಸರಾ ನೋಡಲು ಜಗತ್ತಿನ ಎಲ್ಲ ಭಾಗಗಳಿಂದಲೂ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಹೀಗೆ ಬಂದವರಿಗೆ ಎಲ್ಲ ದಿಕ್ಕುಗಳಲ್ಲೂ ತ್ಯಾಜ್ಯ ಹಾಗೂ ಡೆಬ್ರಿಸ್ ಗುಡ್ಡೆಗಳೇ ಸ್ವಾಗತ ನೀಡುತ್ತಿವೆ. ನಗರಪಾಲಿಕೆಯಿಂದ ಈವರೆಗೆ ಯಾವುದೇ ಒಂದು ವೃತ್ತವನ್ನೂ ಅಂದಗೊಳಿಸುವ ಅಥವಾ ಅಭಿವೃದ್ಧಿಪಡಿಸುವ ಕೆಲಸವಾಗಲಿ ನಡೆದಿಲ್ಲ’ ಎಂದು ಮಾಜಿ ಮೇಯರ್‌ ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಉತ್ಸವಕ್ಕೆ ಕೆಲವೇ ದಿನಗಳು ಉಳಿದಿದ್ದು ಈ ವೇಳೆಗಾಗಲೇ ನಗರದಾದ್ಯಂತ ಹಬ್ಬದ ವಾತಾವರಣ ಕಂಡುಬರಬೇಕಿತ್ತು. ಆದರೆ ಅದ್ಯಾವುದೂ ಇನ್ನೂ ಆಗಿಲ್ಲ. ಅಲ್ಲಲ್ಲಿ ತರಾತುರಿಯಲ್ಲಿ ಡಾಂಬರು ಹಾಕಲಾಗುತ್ತಿದೆ. ಬಸ್‌ ನಿಲ್ದಾಣದ ಎದುರು ಸೇರಿದಂತೆ ಹಲವೆಡೆ ರಸ್ತೆಗಳ ದುರಸ್ತಿಯೂ ಪೂರ್ಣಗೊಂಡಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.