ADVERTISEMENT

ಮೈಸೂರು: ಬಾಣಸಿಗರ ಕೈಯಲ್ಲಿ ನೇಗಿಲು!

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಪಂಚತಾರಾ ಹೋಟೆಲ್‌ ಶೆಫ್‌ಗಳು

ರಮೇಶ ಕೆ
Published 10 ನವೆಂಬರ್ 2020, 4:52 IST
Last Updated 10 ನವೆಂಬರ್ 2020, 4:52 IST
ಸಿಂಧನೂರು ತಾಲ್ಲೂಕಿನ ಆರ್‌.ಎಚ್‌.ಕ್ಯಾಂಪಿನ ಹತ್ತಿ ಹೊಲದಲ್ಲಿ ಬಾಣಸಿಗ ಲಲಿತ್‌ ಮೋಹನ್‌
ಸಿಂಧನೂರು ತಾಲ್ಲೂಕಿನ ಆರ್‌.ಎಚ್‌.ಕ್ಯಾಂಪಿನ ಹತ್ತಿ ಹೊಲದಲ್ಲಿ ಬಾಣಸಿಗ ಲಲಿತ್‌ ಮೋಹನ್‌   

ಮೈಸೂರು: ಪಂಚತಾರಾ ಹೋಟೆಲ್‌ಗಳಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿದ್ದ ಬಾಣಸಿಗರು ಈಗ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬೇರೆಬೇರೆ ಉದ್ಯೋಗ ಕಂಡುಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೋವಿಡ್‌.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಲಲಿತ್‌ ಮೋಹನ್‌ ಅವರು, ಗೋವಾ, ಬೆಂಗಳೂರು ಹಾಗೂ ಮೈಸೂರಿನ ಪಂಚತಾರಾ ಹೋಟೆಲ್‌ಗಳಲ್ಲಿ ಮುಖ್ಯ ಶೆಫ್‌ ಆಗಿ ಕೆಲಸ ಮಾಡಿದವರು. ಕೊರೊನಾ ಲಾಕ್‌ಡೌನ್‌ ತೆರವಾದ ನಂತರ ಹೋಟೆಲ್‌ ಉದ್ಯಮ ನೆಲಕಚ್ಚಿತು, ಸಂಬಳ ಕಡಿಮೆಯಾದ್ದರಿಂದ ಜೀವನ ನಿರ್ವಹಣೆ ಮಾಡಲಾಗದೇ ಊರಿಗೆ ಮರಳಿ ಕೃಷಿಯತ್ತ ತೊಡಗಿಸಿಕೊಂಡಿದ್ದಾರೆ.

‘ಕೋವಿಡ್‌ನಿಂದ ಹೋಟೆಲ್‌ಗಳ ವ್ಯಾಪಾರ ವಹಿವಾಟು ಕಡಿಮೆಯಾಯಿತು. ಸಂಬಳ ಅರ್ಧ ಕಡಿಮೆ ಮಾಡಿದರು. ಇದರಿಂದ ಜೀವನ ನಡೆಸೋದು ಕಷ್ಟವಾಯಿತು. ಊರಿನಲ್ಲಿ 10 ಎಕರೆ ಜಮೀನು ಇತ್ತು. ಮುಂಚೆ ಬೇರೆಯವರಿಗೆ ಕೊಟ್ಟು ಕೃಷಿ ಮಾಡಿಸುತ್ತಿದ್ದೆ. ಸಂಬಳ ಕಡಿಮೆಯಾದ್ದರಿಂದ ಊರಿಗೆ ಹೋಗುವ ನಿರ್ಧಾರ ಮಾಡಿದೆ. ಭತ್ತ, ಜೋಳ ಬೆಳೆಯುತ್ತಿದ್ದೇನೆ. ಮುಂದೆ ಉತ್ತಮ ಲಾಭ ಬಂದರೆ ಇಲ್ಲಿಯೇ ಜೀವನ ಕಂಡುಕೊಳ್ಳಲು ತೀರ್ಮಾನಿಸಿದ್ದೇನೆ’ ಎಂದು ಲಲಿತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಕೂಲಿಯಾಳುಗಳನ್ನಿಟ್ಟು ಕೆಲಸ ಮಾಡಿಸಿದ್ದೇನೆ. ಕೆಲವೊಮ್ಮೆ ಜನ ಕಡಿಮೆ ಬಂದಾಗ ನಾನೇ ಗದ್ದೆಗಿಳಿದು ನಾಟಿ ಮಾಡಿದ್ದೇನೆ’ ಎಂದು ಲಲಿತ್‌ ಹೇಳುತ್ತಾರೆ.

‘ಜಿಯಾನ್, ಐಟಿಸಿ, ಸರೋವರ ಸೇರಿದಂತೆ ಹಲವು ಹೋಟೆಲ್‌ಗಳಲ್ಲಿ ಬಾಣಸಿಗನಾಗಿ ಕೆಲಸ ಮಾಡಿದ್ದೇನೆ. ಲಾಕ್‌ಡೌನ್‌ ನಂತರ ಸಂಬಳ ಅರ್ಧದಷ್ಟು ಕಡಿಮೆಯಾಗಿ ಕುಟುಂಬ ನಿರ್ವಹಣೆ ಕಷ್ಟವಾಯಿತು. ಹೀಗಾಗಿ, ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿರುವ ನಮ್ಮ ಏಳು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ತೀರ್ಮಾನಿಸಿದೆ. ಭತ್ತ ನಾಟಿ ಮಾಡಿಸಿದ್ದೇನೆ. ಹೋಟೆಲ್‌ ಉದ್ಯಮದಲ್ಲಿ ಉತ್ತಮ ಅವಕಾಶ ಸಿಕ್ಕರೆ ಶೆಫ್‌ ಆಗಿ ಮುಂದುವರಿಯುತ್ತೇನೆ. ಇಲ್ಲವಾದರೆ ಕೃಷಿಯಲ್ಲೇ ಬದುಕು ಕಂಡುಕೊಳ್ಳುತ್ತೇನೆ’ ಎಂದು ಬಾಣಸಿಗ ದಿಲೀಪ್‌ ಮೊಹಪಾತ್ರ ಹೇಳುತ್ತಾರೆ.

ನಾಲ್ಕು ದಶಕಕ್ಕೂ ಹೆಚ್ಚು ಸಮಯ ವಿವಿಧ ಸ್ಟಾರ್‌ ಹೋಟೆಲ್‌ಗಳಲ್ಲಿ ಮುಖ್ಯ ಶೆಫ್ ಆಗಿ ಕೆಲಸ ಮಾಡಿದ, ಮೈಸೂರಿನಲ್ಲೇ ನೆಲೆಸಿರುವ ತಮಿಳುನಾಡು ರಾಮೇಶ್ವರಂನ ನಾರಾಯಣ ಅವರು, ಕೊರೊನಾ ಸಂಕಷ್ಟಕ್ಕೆ ಸಿಲುಕಿ ಪರ್ಯಾಯ ಉದ್ಯೋಗ ಕಂಡುಕೊಂಡಿದ್ದಾರೆ. ಖ್ಯಾತ ಸಿನಿಮಾ ನಟರಿಗೆ ಮೆಚ್ಚಿನ ಬಾಣಸಿಗರಾಗಿದ್ದ ಇವರು, ಸದ್ಯ ಹೋಟೆಲ್‌ಗಳಿಗೆ ಅಗತ್ಯ ಅಡುಗೆ ಸಿಬ್ಬಂದಿಯನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒಂದಿಷ್ಟು ಹಣ ಗಳಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನ ಏಳುಬೀಳುಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಬಾಣಸಿಗನಾಗಿ 43 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ.1968ರಲ್ಲಿ ಚೆನ್ನೈನ ಹೋಟೆಲ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಅಡುಗೆ ಮಾಡುವುದನ್ನು ಕಲಿತೆ. 10 ವರ್ಷ ಅನುಭವ ಪಡೆದು ನಂತರ ಮೈಸೂರಿಗೆ ಬಂದೆ. ಇಲ್ಲಿ 30 ವರ್ಷ ಹಲವು ಹೋಟೆಲ್‌ಗಳಲ್ಲಿ ಕೆಲಸ ಮಾಡಿದೆ. ಲಾಕ್‌ಡೌನ್‌ಗೂ ಮುಂಚೆ ₹60 ಸಾವಿರ ಸಂಬಳ ಪಡೆಯುತ್ತಿದ್ದೆ’ ಎಂದು ನಾರಾಯಣ ತಿಳಿಸಿದರು.

‘ರಜನಿಗೆ ನಾಟಿ ಕೋಳಿ ಸಾರು ಇಷ್ಟ’

‘ನನಗೆ ಉತ್ತರ ಭಾರತೀಯ, ತಂದೂರಿ, ಚೈನೀಸ್‌ ಹಾಗೂ ಕಾಂಟಿನೆಂಟಲ್‌ ಅಡುಗೆ ಮಾಡಲು ಬರುತ್ತದೆ. ತಮಿಳಿನ ‘ಲಿಂಗಾ’ ಸಿನಿಮಾ ಚಿತ್ರೀಕರಣದ ವೇಳೆ ಮೈಸೂರಿಗೆ ಬಂದಿದ್ದ ಹಿರಿಯನಟ ರಜನಿಕಾಂತ್‌ ಒಂದು ತಿಂಗಳು ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅವರಿಗೆ ನಾನೇ ಅಡುಗೆ ಮಾಡಿ ಬಡಿಸುತ್ತಿದ್ದೆ. ನಾಟಿ ಕೋಳಿ ಸಾರು ಹಾಗೂ ಫುಲ್ಕ ಅಂದ್ರೆ ಅವರಿಗೆ ಹೆಚ್ಚು ಇಷ್ಟ. ರಾತ್ರಿ ಒಮ್ಮೊಮ್ಮೆ ಮುದ್ದೆ ಊಟ ಮಾಡುತ್ತಿದ್ದರು. ಒಮ್ಮೆ ರಾಜಕುಮಾರ್‌ ಅವರೂ ನನ್ನ ಕೈರುಚಿ ನೋಡಿದ್ದಾರೆ’ ಎಂದು ಬಾಣಸಿಗ ನಾರಾಯಣ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.