ಮೈಸೂರು: ನಗರದ ಚಲುವಾಂಬ ಆಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳಿಗೆ ಆಹಾರ ಪೂರೈಸಲು ತಂದಿರುವ ಅವಲಕ್ಕಿಯಲ್ಲಿ ಹುಳ, ಆಹಾರ ಭದ್ರತಾ ಕಾಯ್ದೆ ಉಲ್ಲಂಘಿಸಿ ತಯಾರಾಗಿರುವ ಆಹಾರ ಪೊಟ್ಟಣ, ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ, ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ..
– ಇದೆಲ್ಲವನ್ನೂ ಗಮನಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೆ.ಆರ್ ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ತಾಯಿ ಮತ್ತು ಮಕ್ಕಳಿಗೆ ನೀಡುವ ಆಹಾರ, ಸ್ಪಚ್ಛತೆಯ ಬಗ್ಗೆ ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅನೇಕ ದೂರುಗಳು ಬಂದ ಕಾರಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಚಲುವಾಂಬ ಆಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳಿಗೆ ಆಹಾರ ಪೂರೈಕೆ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಟೆಂಡರ್ ಪಡೆದವರು ಮೆನುವಿನಲ್ಲಿ ಇರುವ ಆಹಾರ ಪೂರೈಸುತ್ತಿಲ್ಲದಿರುವುದು ಕಂಡುಬಂದಿದೆ’ ಎಂದು ದೂರಿದರು.
‘ಅವಧಿ ಮುಗಿದ ಆಹಾರ ಬಳಸುತ್ತಿದ್ದಾರೆ. ಎಲ್ಲಾ ಆಸ್ಪತ್ರೆಯಲ್ಲೂ ಅಡುಗೆ ಮನೆ ವ್ಯವಸ್ಥೆ ಇದ್ದರೂ, ಚಲುವಾಂಬದಲ್ಲಿ ಆಹಾರ ತಯಾರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಆಯಾ ಸ್ಥಳದಲ್ಲೇ ಆಹಾರ ತಯಾರಿಸಲು ಸೂಚನೆ ನೀಡಿದ್ದೇವೆ. ವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಟೆಂಡರ್ ಹಿಂಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ’ ಎಂದರು.
ಶೌಚಾಲಯ ನಾರುತ್ತಿವೆ: ‘ಶೌಚಾಲಯಗಳು ದುರ್ನಾತ ಬೀರುತ್ತಿವೆ. ಕಸಗಳು ತುಂಬಿ ಆಸ್ಪತ್ರೆ ಆವರಣದಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗದಷ್ಟು ವಾಸನೆ ಬರುತ್ತಿದೆ. ಗುರುವಾರ ಅವನ್ನು ತೆರವುಗೊಳಿಸಿ, ರೋಗಿಗಳಿಗೆ ಅಗತ್ಯ ವಾತಾವರಣ ಸೃಷ್ಟಿಸುವಂತೆ ಸೂಚಿಸಲಾಗಿದೆ. ಆಸ್ಪತ್ರೆಗೆ ಬರುತ್ತಿರುವ ರೋಗಿಗಳಿಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಇವುಗಳಿಗೆ ಅನುದಾನವಿದ್ದರೂ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ. 24 ಗಂಟೆಯೊಳಗೆ ನೀರಿನ ಘಟಕ ಸ್ಥಾಪಿಸಬೇಕು’ ಎಂದು ಸೂಚಿಸಿದರು.
‘ಸರ್ಕಾರ ಬಡವರಿಗಾಗಿ ಅನೇಕ ಉತ್ತಮ ಯೋಜನೆ ಜಾರಿಗೊಳಿಸಿದೆ. ಅಪೌಷ್ಟಿಕ ಮಕ್ಕಳಿಗಾಗಿ ಚಲುವಾಂಬ ಆಸ್ಪತ್ರೆಯಲ್ಲಿ ಉಚಿತವಾಗಿ ಅನ್ನ, ಚಪಾತಿ, ಪಲ್ಯ, ಮೊಟ್ಟೆ, ಮೊಸರು ನೀಡಲಾಗುತ್ತದೆ. ಮಾಹಿತಿಯ ಕೊರತೆ ಹಾಗೂ ಗುಣಮಟ್ಟದ ಕೊರತೆಯಿಂದ ಅನೇಕರು ಈ ಆಹಾರವನ್ನು ಬೇಡ ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇಲ್ಲಿಗೆ ಐದು ಜಿಲ್ಲೆಗಳ ಜನ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಅಮಾನತುಗೊಳಿಸುವ ಮೊದಲು ಅನೇಕ ಬಾರಿ ಯೋಚಿಸಿದ್ದೇವೆ. ಆದರೆ ಶಿಕ್ಷೆಯೇ ಇಲ್ಲ ಎಂದರೆ ನಿರ್ಲಕ್ಷ್ಯ ಮುಂದುವರೆಯುತ್ತದೆ. ಆಹಾರದ ಗುಣಮಟ್ಟ ಪರೀಕ್ಷೆಗೆ ಕಳುಹಿಸಿದ್ದು, ವ್ಯತ್ಯಾಸ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದರು.
ಆಯೋಗದ ಸದಸ್ಯರಾದ ಸುಮಂತ್ ರಾವ್, ಕೆ.ಎಸ್.ವಿಜಯಲಕ್ಷ್ಮಿ, ರೋಹಿಣಿ, ಆಸ್ಪತ್ರೆಯ ಡೀನ್ ಕೆ.ಆರ್.ದಾಕ್ಷಾಯಿಣಿ ಭಾಗವಹಿಸಿದ್ದರು.
ಇಬ್ಬರು ಸಿಬ್ಬಂದಿ ಅಮಾನತು
‘ಗುಣಮಟ್ಟದ ಆಹಾರ ಪೂರೈಸದ ಕಾರಣ ಐಎನ್‌ಯು ವಿಭಾಗದ ಲೀಲಾವತಿ ಹಾಗೂ ಲಾರೆನ್ಸ್ ಎನ್ನುವವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಅವರಿಗೆ ನೋಟಿಸ್ ನೀಡುವಂತೆ ತಿಳಿಸಲಾಗಿದೆ’ ಎಂದು ಡಾ.ಎಚ್. ಕೃಷ್ಣ ತಿಳಿಸಿದರು. ಈ ವೇಳೆ ಚಲುವಾಂಬ ಆಸ್ಪತ್ರೆಯ ಮೇಲ್ವಿಚಾರಕಿ ಸುಧಾ ‘ಅವರಿಬ್ಬರೂ ಅನೇಕ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದರೆ ಸಾಕು’ ಎಂದು ಕೋರಿದರು. ಕೋಪಗೊಂಡ ಅಧ್ಯಕ್ಷರು ‘ಅವರಿಬ್ಬರ ಅಮಾನತು ಬೇಡವಾದರೆ ಮೇಲ್ವಿಚಾರಕರಾದ ನಿಮ್ಮನ್ನು ಅಮಾನತುಗೊಳಿಸುತ್ತೇವೆ. ಇದು ಎಚ್ಚರಿಕೆಯ ಪಾಠವಾಗಲಿ ಎಂಬ ಕಾರಣಕ್ಕೆ ತಾತ್ಕಾಲಿಕ ಅಮಾನತಿಗೆ ಸೂಚಿಸಿದ್ದೇನೆ. ಎಲ್ಲರೂ ಅವರವರ ಕೆಲಸ ಶ್ರದ್ಧೆಯಿಂದ ಮಾಡಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ತಿಳಿಸಿದರು.
ರೋಗಿಗಳಿಗೆ ಹಾಳಾದ ಹಾಸಿಗೆ!
‘ಚಲುವಾಂಬ ಆಸ್ಪತ್ರೆಯಲ್ಲಿ 250 ಹೊಸ ಹಾಸಿಗೆಗಳಿವೆ. ಆದರೆ ರೋಗಿಗಳನ್ನು ಹರಿದು ಹೋದ ಹಾಸಿಗೆಯಲ್ಲಿ ಮಲಗಿಸಿದ್ದಾರೆ. ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇಂಡೆಂಟ್ ಕೊಟ್ಟಿಲ್ಲ ಎನ್ನುತ್ತಾರೆ. ಸರ್ಕಾರಿ ವ್ಯವಸ್ಥೆ ನಮ್ಮದು ಎಂಬ ಕಾಳಜಿ ವಹಿಸಿದಾಗ ಈ ತಪ್ಪುಗಳಾಗುವುದಿಲ್ಲ’ ಎಂದು ಕೃಷ್ಣ ವಿವರಿಸಿದರು.
ವಾರ್ತಾ ಇಲಾಖೆಯವರಿಗೂ ತರಾಟೆ
ತಮ್ಮ ಪ್ರವಾಸದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಕೊಡದಿರುವ ಬಗ್ಗೆ ಅಧ್ಯಕ್ಷರು ವಾರ್ತಾ ಇಲಾಖೆಯವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿ ನಡೆಸುವ ಬಗ್ಗೆ ಕೊನೆಯ ಕ್ಷಣದಲ್ಲಿ ಮಾಹಿತಿ ಕೊಟ್ಟಿದ್ದಕ್ಕೆ ಸಿಟ್ಟಾದರು. ‘ನಾನು ಭೇಟಿ ಕೊಡುವ ಬಗ್ಗೆ ವಾರ್ತಾ ಇಲಾಖೆಯವರಿಗೆ ಮಾಹಿತಿ ಕೊಡಲಾಗಿತ್ತು. ಆದರೆ ಅವರು ಪತ್ರಕರ್ತರಿಗೆ ತಿಳಿಸಿಲ್ಲ. ನಾನು ಪರಿಶೀಲಿಸುವ ವೇಳೆ ಪತ್ರಕರ್ತರು ಇದ್ದಿದ್ದರೆ ಇಲ್ಲಿನ ಅವ್ಯವಸ್ಥೆಯು ಇನ್ನಷ್ಟು ದೊಡ್ಡದಾಗಿ ಬಿಂಬಿತವಾಗುತ್ತಿತ್ತು. ಆಗ ಸುಧಾರಣೆಗೆ ಅವಕಾಶವಿತ್ತು. ಇಲಾಖೆಯವರಿಗೆ ಮಾಹಿತಿ ಕೊಡುವುದು ಸಾಧ್ಯವಾಗದಿದ್ದರೆ ಹೇಗೆ ಮಾಹಿತಿ ತಲುಪಿಸಬೇಕು ಎನ್ನುವುದು ನನಗೆ ಗೊತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.