ADVERTISEMENT

ಕಲ್ಲಂಗಡಿಗೆ ರಾಸಾಯನಿಕ ಸೇರ್ಪಡೆ: ವದಂತಿ ತಂದ ಫಜೀತಿ

ರಾಸಾಯನಿಕ ಸೇರ್ಪಡೆ ಸುಳ್ಳು ಸುದ್ದಿಗೆ ರೈತರ ಸಂಕಷ್ಟ, ದರ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 7:31 IST
Last Updated 9 ಏಪ್ರಿಲ್ 2025, 7:31 IST
ಮೈಸೂರಿನ ಆದಿಚುಂಚನಗಿರಿ ರಸ್ತೆಯಲ್ಲಿ ವ್ಯಾಪಾರಿಯೊಬ್ಬ ಮಾರಾಟಕ್ಕಾಗಿ ಕಲ್ಲಂಗಡಿ ಹಣ್ಣು ಜೋಡಿಸುತ್ತಿರುವುದು (ಸಾಂದರ್ಭಿಕ ಚಿತ್ರ)
ಮೈಸೂರಿನ ಆದಿಚುಂಚನಗಿರಿ ರಸ್ತೆಯಲ್ಲಿ ವ್ಯಾಪಾರಿಯೊಬ್ಬ ಮಾರಾಟಕ್ಕಾಗಿ ಕಲ್ಲಂಗಡಿ ಹಣ್ಣು ಜೋಡಿಸುತ್ತಿರುವುದು (ಸಾಂದರ್ಭಿಕ ಚಿತ್ರ)   

ಮೈಸೂರು: ರಾಸಾಯನಿಕ ಸೇರ್ಪಡೆ ವದಂತಿಯಿಂದಾಗಿ ಕೆಲವೆಡೆ ಕಲ್ಲಂಗಡಿ ಹಣ್ಣಿನ ಬೇಡಿಕೆ ಕುಸಿದಿದ್ದು, ರೈತರು ಹಣ್ಣುಗಳನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ.

ಬಿರು ಬಿಸಿಲಿನಲ್ಲಿ ದೇಹವನ್ನು ತಂಪಾಗಿರಿಸಲು ನೆರವಾಗುವ ಕಲ್ಲಂಗಡಿ ಹಣ್ಣಿನ ಬೆಲೆ ಕಡಿಮೆಯಾದರೂ, ಖರೀದಿಸಲು ಗ್ರಾಹಕರು ಮುಂದೆ ಬರುತ್ತಿಲ್ಲ. ಇದರಿಂದ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಾರಿ ಇಳುವರಿಯೂ ಹೆಚ್ಚಾಗಿದೆ. ನೆರೆ ರಾಜ್ಯದಿಂದಲೂ ಬೇಡಿಕೆಗೂ ಮೀರಿ ಕಲ್ಲಂಗಡಿ ಆಮದು ಮಾಡಿಕೊಳ್ಳಲಾಗಿದೆ. ವದಂತಿಯಿಂದ ರೈತರು ಬೆಳೆಯನ್ನು ಮಾರಾಟ ಮಾಡಲಾಗದೆ, ಹೊಲದಲ್ಲಿಯೂ ಬಿಡಲಾಗದ ಸ್ಥಿತಿಯಲ್ಲಿದ್ದಾರೆ.

ADVERTISEMENT

ಉತ್ತಮ ಆದಾಯ ಸಿಗುತ್ತದೆಂಬ ಕಾರಣಕ್ಕೆ ಈ ಬಾರಿ ಅತಿ ಹೆಚ್ಚು ರೈತರು ಕಲ್ಲಂಗಡಿ ಬಿತ್ತನೆ ಮಾಡಿದ್ದರು. ಒಳ್ಳೆಯ ವಾತಾವರಣವಿದ್ದರಿಂದ ಇಳುವರಿ ಹೆಚ್ಚಿತ್ತು. ಆದರೆ, ಪ್ರಸ್ತುತ ಮಾರಾಟಗಾರರು ರೈತರಿಂದ ಪ್ರತಿ ಕೆಜಿಗೆ ₹5, ₹8ಕ್ಕೆ ಕಲ್ಲಂಗಡಿ ಖರೀದಿಸುತ್ತಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಕೆ.ಜಿ.ಗೆ ₹18, ₹20 ಬೆಲೆ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಪ್ರತಿ ಕೆ.ಜಿ.ಗೆ ₹15ರಿಂದ ₹20ಕ್ಕೆ ಮಾರಾಟವಾಗುತ್ತಿದೆ.

‘ರಾಜ್ಯದಾದ್ಯಂತ ರೈತರು ಸಾವಿರಾರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕಿಡಿಗೇಡಿಗಳು ಕಲ್ಲಂಗಡಿ ಹಣ್ಣಿಗೆ ಬಣ್ಣ ಬರಲು ಆರೋಗ್ಯಕ್ಕೆ ಹಾನಿಕರವಾಗಿರುವ ರಾಸಾಯನಿಕ ಚುಚ್ಚುಮದ್ದು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಮಾಡಿದ್ದಾರೆ’ ಎಂದು ಮಾರ್ಬಳ್ಳಿ ರೈತ ದೀಪಕ್ ಅಲವತ್ತುಕೊಂಡರು.

‘ವದಂತಿಗೆ ಬಹಳಷ್ಟು ಜನ ಕಲ್ಲಂಗಡಿ ತಿನ್ನುವ ಮನಸ್ಸು ಮಾಡುತ್ತಿಲ್ಲ. ಹೋದ ವರ್ಷವೆಲ್ಲ ಒಂದು ಲೋಡ್ ಕಲ್ಲಂಗಡಿ ಮೂರು ದಿನದಲ್ಲಿ ಖಾಲಿಯಾಗುತ್ತಿತ್ತು. ಆದರೆ, ಈ ಬಾರಿ ಹತ್ತು ಹದಿನೈದು ದಿನಗಳಾದರೂ ಖಾಲಿಯಾಗುತ್ತಿಲ್ಲ’ ಎನ್ನುತ್ತಾರೆ ಮಾರಾಟಗಾರರು.

ನೀರಿನ ಮಟ್ಟ ಸಮತೋಲನ: ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿ ಇಡಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಶೇ 90ರಷ್ಟು ನೀರಿನಾಂಶ ಹೊಂದಿದ್ದು, ಬೇಸಿಗೆ ಸಮಯದಲ್ಲಿ ದೇಹ ತಂಪಾಗಿಸುತ್ತದೆ. ಅದರಲ್ಲಿನ ಪೊಟಾಶಿಯಂ ಸೋಡಿಯಂ, ಕಾರ್ಬೋಹೈಡ್ರೆಟ್ಸ್, ನಾರಿನಾಂಶ ಮೊದಲಾದವು ಬಿಸಿಲಿಗೆ ದೇಹಕ್ಕೆ ರಕ್ಷಣೆ ನೀಡುತ್ತವೆ.

****

ವದಂತಿಯು ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಿಹಿಯಾಗಿರುವ ಕಲ್ಲಂಗಡಿ ಕೊಡಿ ಎನ್ನುತ್ತಿದ್ದ ಗ್ರಾಹಕರು ಈಗ ಇಂಜೆಕ್ಷನ್ ಮಾಡದಿರುವ ಕಲ್ಲಂಗಡಿ ಕೊಡಿ ಎನ್ನುವ ಸ್ಥಿತಿ ಬಂದಿದೆ

–ಪುನೀತ್‌ ಕಲ್ಲಂಗಡಿ ಮಾರಾಟಗಾರ

ಕಲ್ಲಂಗಡಿ ಹಣ್ಣಿನಲ್ಲಿ ಏನೋ ರಾಸಾಯನಿಕ ಸೇರ್ಪಡೆ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಎಷ್ಟು ನಿಜವೋ ಗೊತ್ತಿಲ್ಲ. ಎಲ್ಲರೂ ಹಾಗೇ ಮಾಡಲು ಸಾಧ್ಯವಿಲ್ಲ

–ಚಂದನ್ ಸರಸ್ವತಿಪುರಂ ನಿವಾಸಿ

***

‘ಹಣ್ಣಿಗೆ ಮದ್ದು ನೀಡಲು ಅಸಾಧ್ಯ’

‘ಪ್ರತಿ ಹಣ್ಣಿಗೂ ಅದರದ್ದೇ ಸ್ವಭಾವ ಬಣ್ಣ ಮತ್ತು ಆಕಾರ ರುಚಿ ಇರುತ್ತದೆಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಹಣ್ಣಿಗೆ ಕೃತಕವಾಗಿ ಯಾವುದೇ ಮದ್ದು ನೀಡಲು ಸಾಧ್ಯವಿಲ್ಲ. ಒಂದು ಎಕರೆಯಲ್ಲಿ 20 ಟನ್ ಕಲ್ಲಂಗಡಿ ಬೆಳೆದಿದ್ದು ಸುಮಾರು 8 ಸಾವಿರದಿಂದ 10 ಸಾವಿರ ಹಣ್ಣುಗಳಿವೆ. ಎಲ್ಲಕ್ಕೂ ಇಂಜೆಕ್ಷನ್ ನೀಡಲು ಸಾಧ್ಯವಿಲ್ಲ. ಸೂಜಿ ಚುಚ್ಚಿದರೆ ಒಂದು ದಿನ‌ದಲ್ಲಿ ಕೊಳೆತು ಹೋಗುತ್ತದೆ’ ಎಂದು ಬೆಳೆಗಾರ ಮಾರ್ಬಳ್ಳಿ ದೀಪಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.