ನಂಜನಗೂಡು: ‘ಛತ್ರಪತಿ ಶಿವಾಜಿಯ ಧೈರ್ಯ, ಶೌರ್ಯ, ದೇಶಪ್ರೇಮ ಯುವಕರಿಗೆ ಸ್ಫೂರ್ತಿದಾಯಕ’ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಗುರುವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ತಾಯಿಯಿಂದ ರಾಜ್ಯದ ಆಡಳಿತ, ದೇಶಪ್ರೇಮದ ಪಾಠವನ್ನು ಕಲಿತ ಶಿವಾಜಿ ಮಹಾರಾಜ್ ಧರ್ಮರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ನ್ಯಾಯಪರತೆ, ಸ್ವರಾಜ್ಯದ ಕಲ್ಪನೆ, ದೇಶಭಕ್ತಿಯ ಆದರ್ಶ ಗುಣಗಳನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅವರ ದೇಶಪ್ರೇಮ ಮತ್ತು ಶೌರ್ಯ ಆದರ್ಶ ಗುಣಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾಯಿಯಾಗಿದ್ದಾರೆ. ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕಳಲೆ ಕೇಶವಮೂರ್ತಿ ಮಾತನಾಡಿ, ‘ಸರ್ವಜ್ಞ ಮಹಾಕವಿಯು ರಾಜರ ಆಶ್ರಯ ಪಡೆಯದೆ ಜನರ ಮಧ್ಯೆ ಜೀವಿಸಿ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದರು. ಮಹಾಕವಿ, ಸರ್ವ ಶ್ರೇಷ್ಠ ಕವಿ ಎಂದು ಹೆಸರು ಪಡೆದಿದ್ದಾರೆ. ತಮ್ಮ ತ್ರಿಪದಿಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿದ್ದ ಮಹಾಕವಿಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು’: ಎಂದರು.
ಕಾರ್ಯಕ್ರಮದಲ್ಲಿ ಸರೋಜಭಾಯಿ, ರಾಜಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್, ಸತೀಶ್ ರಾವ್, ಮಲ್ಲಹಳ್ಳಿ ನಾರಾಯಣ, ಇಮ್ಮಾವು ರಘು, ಶಿವಪ್ಪದೇವರು, ಶಿವಣ್ಣ, ಮರಿಶೆಟ್ಟಿ, ಕಾಶೀನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.